ಕಲಬುರಗಿ, ನ.20: ಬಡ ಮತ್ತು ಸಾಮಾನ್ಯ ಜನರಿಗೆ ಉಚಿತವಾಗಿ ವಿತರಿಸಬೇಕಿದ್ದ ಸರಕಾರಿ ಔಷಧಿಗಳು ಕಾಗಿಣಾ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಘಟನೆ ಆರೋಗ್ಯ ಇಲಾಖೆಯ ಕಾರ್ಯನಿರ್ವಹಣೆ ಹಾಗೂ ಔಷಧಿಗಳ ನಿರ್ವಹಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಹಬಾದ್–ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿ-150ರ ಕಾಗಿಣಾ ನದಿ ಸೇತುವೆಯ ಕೆಳಭಾಗದಲ್ಲಿ ಅಪಾರ ಪ್ರಮಾಣದ ಸರಕಾರಿ ಔಷಧಿಗಳು ಹಾಗೂ ಸಿರಪ್ ಬಾಟಲಿಗಳನ್ನು ಎಸೆಯಲಾಗಿರುವುದು ಬೆಳಕಿಗೆ ಬಂದಿದೆ.

ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್ 500 ಎಂ.ಜಿ. ಮಾತ್ರೆಗಳು, ಟೆಲ್ಮಿಸಾರ್ಟನ್ 40 ಎಂ.ಜಿ. ಮಾತ್ರೆಗಳು ಸೇರಿದಂತೆ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ನೀಡುವ ಸಿರಪ್ ಬಾಟಲಿಗಳು ನದಿ ಪಾತ್ರದಲ್ಲಿ ಪತ್ತೆಯಾಗಿವೆ. ಸಾರ್ವಜನಿಕರಿಗೆ ಉಚಿತವಾಗಿ ವಿತರಣೆಯಾಗಬೇಕಿದ್ದ ಔಷಧಿಗಳು ಈ ರೀತಿ ನದಿ ಪಾಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರಿ ನಿಯಮಗಳ ಪ್ರಕಾರ ಅವಧಿ ಮೀರಿದ ಔಷಧಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಮಾಡುವುದು ಕಡ್ಡಾಯವಾಗಿದೆ. ಆದರೆ, ಔಷಧಿಗಳನ್ನು ನದಿ ಪಾತ್ರದಲ್ಲಿ ಎಸೆಯಲು ಯಾರು ಅನುಮತಿ ನೀಡಿದರು? ಇವು ಅವಧಿ ಮೀರಿದ ಔಷಧಿಗಳೇ ಅಥವಾ ಬಳಕೆಗೆ ಯೋಗ್ಯವಾಗಿದ್ದರೂ ವಿಲೇವಾರಿ ಮಾಡಲಾಗಿದೆಯೇ? ಯಾವ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರದಿಂದ ಇವುಗಳನ್ನು ತರಲಾಗಿದೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಬಡವರಿಗೆ ತಲುಪಬೇಕಾದ ಉಚಿತ ಔಷಧಿಗಳು ಈ ರೀತಿ ನದಿ ಪಾಲಾಗುತ್ತಿರುವುದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಆರೋಗ್ಯ ಇಲಾಖೆ ಸಮಗ್ರ ತನಿಖೆ ನಡೆಸಿ, ಔಷಧಿಗಳ ಮೂಲ ಪತ್ತೆಹಚ್ಚಬೇಕು. ಸರ್ಕಾರಿ ಔಷಧಿಗಳನ್ನು ನಿಯಮಬಾಹಿರವಾಗಿ ನದಿ ಪಾತ್ರದಲ್ಲಿ ಎಸೆದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor