×
Ad

ಕಲಬುರಗಿ| ಅತಿವೃಷ್ಟಿಯಿಂದಾಗಿ ಅಪಾರ ಹಾನಿ; ಅಧ್ಯಯನ ತಂಡ ಕಳುಹಿಸುವಂತೆ ಬಿ.ಆರ್.ಪಾಟೀಲ್ ಆಗ್ರಹ

Update: 2025-08-16 20:52 IST

ಕಲಬುರಗಿ: ಈ ವರ್ಷ ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 280 ಮಿಮಿ ಮಳೆಯಾಗಬೇಕಿತ್ತು, ಆದರೆ 318 ಮಿಮಿ ನಷ್ಟು ಹೆಚ್ಚಾಗಿದೆ, ಅದರಂತೆ ಕಲಬುರಗಿಯಲ್ಲಿ 62 ಮಿಮಿ ನಷ್ಟು ಆಗಬೇಕಾಗಿದ್ದ ಮಳೆ 108 ಮಿಮಿನಷ್ಟು ಹೆಚ್ಚಾಗಿ ಹಳ್ಳ, ಕೊಳ್ಳ, ನದಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್‌ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಿಂದ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವರಾಗಿರುವ ಪ್ರಹ್ಲಾದ್‌ ಜೋಶಿ ಅವರು ಕೇವಲ ತಮ್ಮ ಮತ ಕ್ಷೇತ್ರವಾಗಿರುವ ಹುಬ್ಬಳ್ಳಿ ಧಾರವಾಡಗೆ ಮಾತ್ರ ಸೀಮಿತವಾಗಿದ್ದಾರೆ, ಸಂಪುಟ ಸಚಿವರಾಗಿ ಪಾರ್ಲಿಮೆಂಟ್‌ನಲ್ಲಿ ಧ್ವನಿಯೆತ್ತಿ ಮಳೆಯಿಂದಾಗಿರುವ ಹಾನಿಯ ಕುರಿತು ಮಾತನಾಡಿ ಪರಿಹಾರ ಕಂಡುಕೊಳ್ಳದಿರುವುದು ಖಂಡನೀಯ, ಕೂಡಲೇ ಅತೀವೃಷ್ಟಿಯಾಗಿರುವ ಕುರಿತಾಗಿ ಸಮೀಕ್ಷೆಗೆ ಅಧ್ಯಯನ ತಂಡ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಿಂದ 17 ಬಿಜೆಪಿ ಸಂಸದರಿದ್ದರೂ ಕೇಂದ್ರ ಸರಕಾರದ ಮುಂದೆ ತುಟಿಬಿಚ್ಚದಿರುವುದು ನೋಡಿದರೆ ಜನರ ಬಗ್ಗೆ ಅವರ ಕಾಳಜಿ ಇಲ್ಲದಿರುವುದು ಗೊತ್ತಾಗುತ್ತದೆ, ಅಲ್ಲದೆ ಇವರೆಲ್ಲ ನಿಷ್ಕ್ರಿಯ ಸಂಸದರಾಗಿದ್ದಾರೆ. ಶೋಭಾ ಕರಂದ್ಲಾಜೆ ಮತ್ತು ಸೋಮಣ್ಣನವರು ಸಹ ಸಚಿವರಾಗಿದ್ದರೂ ರಾಜ್ಯದ ಜನರ ನೋವಿಗೆ ಸ್ಪಂದಿಸುವ ವ್ಯವದಾನವಿಲ್ಲದ ಬಿಜೆಪಿಯ ಸಂಸದ ಸಚಿವರ ವಿರುದ್ದ ಬೇಸರ ವ್ಯಕ್ತಪಡಿಸಿದರು.

ವಾಡಿಕೆಗಿಂತ ಈ ಬಾರಿ ಶೇ. 50ರಷ್ಟು ಮಳೆ ಹೆಚ್ಚಾಗಿ ರೈತರ ಅಲ್ಪಾವಧಿ ಬೆಳೆಗಳಾದ ಉದ್ದು, ಹೆಸರು ಸೇರಿದಂತೆ ವಿವಿಧ ಬೆಳೆಗಳು ಕೆಸರಿನ ಮಧ್ಯೆ ಸಿಲುಕಿಕೊಂಡಿವೆ, ಇದರಿಂದ ಇಳುವರಿ ಬರುವ ಯಾವುದೇ ಲಕ್ಷಣಗಳಿಲ್ಲ, ಜೊತೆಗೆ ವಾಣಿಜ್ಯ ಬೆಳೆ ತೊಗರಿಯ ಸ್ಥಿತಿಯಂತು ಅಷ್ಟಕ್ಕಷ್ಟೇ ಆಗಿದೆ. ಹಾಗಾಗಿ ರಾಜ್ಯ ಸರಕಾರ ಸಚಿವರ ತಂಡವನ್ನು ಕೇಂದ್ರ ಸರಕಾರದ ಸಚಿವರ ಭೇಟಿ ಮಾಡಿ ವಾಸ್ತವ ಸ್ಥಿತಿಗತಿಯನ್ನು ವಿವರಿಸಿ ಅನುದಾನವನ್ನು ತರಲು ಪ್ರಯತ್ನಿಸಬೇಕೆಂದು ಆಗ್ರಹಿಸಿದರು.

ಮಳೆಯಿಂದ ಹಾನಿಯಾದ ಪ್ರದೇಶಗಳ ಜನರಿಗೆ ಎನ್‌ಡಿಆರ್‌ಎಫ್‌ ನಿಯಮದಂತೆ ತಾತ್ಕಾಲಿಕವಾಗಿ ಕೇವಲ 5 ಸಾವಿರ ರೂ. ಪರಿಹಾರ ನೀಡಬಹುದು, ಆದರೆ ಹೆಚ್ಚಿನ ನಷ್ಟ ಸಂಭವಿಸಿದ್ದಲ್ಲಿ ಜನರು ಸಂಕಷ್ಟ ಪಡುವ ತಾಪತ್ರಯವಿದೆ, ಹಾಗಾಗಿ ಕೇಂದ್ರ ಸರಕಾರ ಕಳೆದ ಬಾರಿ ಬರಬೇಕಾಗಿರುವ ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಡ ಹೇರಿದರು.

ಸುದ್ದಿಗೋಷ್ಠಿಯಲ್ಲಿ ಶಿವಶರಣಪ್ಪ ಮೂಳೆಗಾಂವ, ಜಗನ್ನಾಥ ದೇಶಮುಖ, ರಾಜಶೇಖರ ಯಂಕಂಚಿ ಇದ್ದರು.

 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News