ಕಲಬುರಗಿ | ಶರಣಬಸವಪ್ಪ ಅಪ್ಪಾ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ದಾಸೋಹ ಪರಂಪರೆ ಮುಂದುವರೆಸುವೆ: ಚಿ.ದೊಡ್ಡಪ್ಪ ಅಪ್ಪಾ
ಕಲಬುರಗಿ: ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದು ರಾಷ್ರ್ಟೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಂದ ನನ್ನನ್ನು ನಿಮ್ಮ ಮನೆಯ ಮಗನೆಂದು ತಿಳಿದು ಅಪ್ಪಾಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ದಾಸೋಹ ಪರಂಪರೆಯನ್ನು ಮುಂದುವರೆಸಿಕೊಂಡು ನನ್ನ ಜೀವನವನ್ನು ಸಮಾಜ ಕಲ್ಯಾಣಕ್ಕಾಗಿ ಮುಡಿಪಾಗಿಡುತ್ತೇನೆಂದು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಭಕ್ತಾದಿಗಳಿಗೆ ಭರವಸೆ ನೀಡಿದರು.
ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಗುರುವಾರದಂದು ಏರ್ಪಡಿಸಿದ್ದ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾ ಅವರ ಸನ್ನಿಧಿಗೆ ನುಡಿ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗೈಕ್ಯ ಶರಣಬಸವಪ್ಪ ಅಪ್ಪಾಜಿಯವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಲ್ಲರಿಗೂ ಪ್ರೀತಿಯ ಅಪ್ಪಾಜಿಯೆಂದೇ ಚಿರಪರಿಚಿತರೆಂದು ತಿಳಿಸಿದರು.
ಮೊದಲಿಗೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪಾ, ಅವರ ಸಹೋದರಿಯರ ಜೊತೆ ಸೇರಿಕೊಂಡು ಲಿಂಗೈಕ್ಯ ಡಾ.ಅಪ್ಪಾಯವರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ನುಡಿ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ಡಾ.ಶರಣಬಸವಪ್ಪ ಅಪ್ಪಾಯವರ ಸ್ಮರಣಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಶ್ರೀಶೈಲಂನ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಡಾ.ಅಪ್ಪಾಜಿಯವರು ಎಂದಿಗೂ ಹೋಮ ಹವನ ಮಾಡದೆ ಇಷ್ಟಲಿಂಗ ಪೂಜೆ ಮಾಡಿ ತ್ರಿವಿಧ ದಾಸೋಹಿಗಳಾಗಿ ಬಸವ ತತ್ವ ಪಾಲನೆ ಮಾಡುತ್ತಿದ್ದರು. ದೆಹಲಿಯಲ್ಲಿ ಸಂಸತ್ತಿನ 9ನೇ ಮಹಾದ್ವಾರದಲ್ಲಿ ಮಹಾತ್ಮ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪನೆ ಮಾಡಿದ್ದು ಅಪ್ಪಾಜಿಯವರ ಒಂದು ಮಹಾ ಸಾಧನೆ ಎಂದರು.
ಇದೇ ಸಮಯದಲ್ಲಿ ಬೆಳಗುಂಪಾದ ಅಭಿನವ ಪರ್ವತೇಶ್ವರ ಸ್ವಾಮೀಜಿಗಳು ಮಾತನಾಡುತ್ತಾ, ಲಿಂಗೈಕ್ಯ ದೊಡ್ಡಪ್ಪ ಅಪ್ಪಾಯವರು ಅಂದು ಅನ್ನದಾಸೋಹ ಮಾಡಿ ಶಿಕ್ಷಣದಾಸೋಹಕ್ಕೆ ಚಾಲನೆ ನೀಡಿದ್ದರು. ಅದನ್ನು ಡಾ.ಅಪ್ಪಾಜಿಯವರು ಮುಂದುವರೆಸಿಕೊಂಡು ಅನ್ನದಾಸೋಹದ ಜತೆಗೆ ಶಿಕ್ಷಣಕ್ಕೆ ಮಹತ್ವ ಕೊಟ್ಟು ಇಂದು ವಿಶ್ವವಿದ್ಯಾಲಯದ ಮಟ್ಟಕ್ಕೆ ಬೆಳೆಸಿದ್ದಾರೆ. ಚಿರಂಜೀವಿ ಅಪ್ಪಾಜಿಯವರಿಗೆ ನೋಡಿದರೆ ಲಿಂಗೈಕ್ಯ ದೊಡ್ಡಪ್ಪ ಅಪ್ಪಾಜಿಯವರ ಪ್ರತಿರೂಪದಂತೆ ಕಾಣಿಸುತ್ತಾರೆ. 8ನೇ ವರ್ಷಕ್ಕೆ 80ವರ್ಷದಂತಹ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಚೌಡಾಪುರಿ ಹೀರೆಮಠದ ಡಾ.ರಾಜಶೇಖರ ಶಿವಾಚಾರ್ಯರು, ನುಡಿ ಪುಷ್ಪಾಂಜಲಿ ಸಲ್ಲಿಸುತ್ತಾ ಪೂಜ್ಯ ಡಾ.ಅಪ್ಪಾಜಿಯವರು ದೂರದೃಷ್ಠಿ ಉಳ್ಳವರಾಗಿದ್ದರು. ಅವರಲ್ಲಿ ಯಾವುದೇ ಅಹಂಭಾವವಿರಲಿಲ್ಲ, ದೀನರಿಗೆ ದಲಿತರಿಗೆ ಬಡವರಿಗೆ ಶಿಕ್ಷಣ ದಾಸೋಹ ಗೈಯ್ಯುತ್ತಿದ್ದರು. ಅವರಿಗೆ ಆರೋಗ್ಯದ ಬಗ್ಗೆ ಬಹಳ ಕಾಳಜಿಯಿತ್ತು. ಆಯುರ್ವೇದ ತಿಳಿವುಳ್ಳವರಾಗಿದ್ದರು. ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರಿಗೆ ನೋಡಿದರೆ ಶರಣರೇ ಭೂಮಿಗೆ ಬಂದ ಅನುಭವವಾಗುತ್ತದೆ ಎಂದರು.
ಪೂಜ್ಯ ಡಾ. ಅಪ್ಪಾಜಿಯವರ ಮಕ್ಕಳಾದ ಶಿವಾನಿ ಎಸ್.ಅಪ್ಪ, ಭವಾನಿ ಎಸ್.ಅಪ್ಪ ಹಾಗೂ ಮಹೇಶ್ವರಿ ಎಸ್.ಅಪ್ಪ “ಅಪ್ಪಾ ಐ ಲವ್ ಯು ಪಾ” ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡುವಾಗ ಎಲ್ಲರ ಕಣ್ಣಂಚಿನಲ್ಲಿ ನೀರು ಚಿಗುರೊಡೆದಿತ್ತು. ತದನಂತರ ಎಲ್ಲರೂ ಸೇರಿ ತಮ್ಮ ತಂದೆ ಪೂಜ್ಯ ಡಾ.ಅಪ್ಪಾಜಿಯವರಿಗೆ ನುಡಿ ಪುಷ್ಪಾಂಜಲಿ ಸಲ್ಲಿಸಿದರು.
ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾ, ಸಚಿವ ಶರಣಪ್ರಕಾಶ ಪಾಟೀಲ್ ಅವರ ಧರ್ಮಪತ್ನಿ ಭಾಗ್ಯಶ್ರೀ ಪಾಟೀಲ ಮಾತನಾಡಿದರು.
ಶಾಸಕರಾದ ಬಿ.ಆರ್.ಪಾಟೀಲ್, ಶಶೀಲ ಜಿ.ನಮೋಶಿ, ಅಲ್ಲಮಪ್ರಭು ಪಾಟೀಲ, ಬಿ.ಜಿ.ಪಾಟೀಲ, ಮಾರುತಿರಾವ್ ಮೂಳೆ, ಮಾಜಿ ಸಂಸದರಾದ ಬಸವರಾಜ ಪಾಟೀಲ ಸೇಡಂ, ಡಾ.ಉಮೇಶ ಜಾಧವ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪ್ರಮುಖರು ಉಪಸ್ಥಿತರಿದ್ದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಬಸವರಾಜ ಭೀಮಳ್ಳಿ, ಡಾ.ಭೀಮಾಶಂಕರ ಬಿಲಗುಂದಿ, ಶಾಸಕ ಬಸವರಾಜ ಮತ್ತಿಮೂಡ, ರಾಜು ಭೀಮಳ್ಳಿ, ಶಿವಶರಣಪ್ಪ ವಾಲಿ, ಶಾಸಕ ಎಮ್. ವಾಯ್.ಪಾಟೀಲ, ಅಪ್ಪಾರಾವ್ ಅಕ್ಕೋಣಿ, ಲಕ್ಷ್ಮಣ ದಸ್ತಿ, ಅರುಣಕುಮಾರ ಪಾಟೀಲ, ಎಸ್. ಎಮ್. ಹೀರೆಮಠ, ಶರಣಪ್ಪ ಹಲ್ಸೆ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ, ನಿರ್ದೇಶಕ ಪ್ರೊ. ವಿ. ಡಿ. ಮೈತ್ರಿ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಸಂಘದ ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು ವಿವಿಯ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಯಾನಂದ ಹೊಡಲ್ ನಿರೂಪಿಸಿದರು. ಡಾ.ನೀಲಾಂಬಿಕಾ ಪೋಲಿಸ್ ಪಾಟೀಲ ಸ್ವಾಗತಿಸಿದರು.