×
Ad

Kalaburagi | ಶಾಸನಗಳು ಇತಿಹಾಸದ ಆಧಾರಸ್ತಂಭಗಳು: ಡಾ.ಬಸವರಾಜ ಭಾಗಾ

Update: 2026-05-16 22:44 IST

ಕಲಬುರಗಿ: ಮಾನವ ಜನಾಂಗದ ಚರಿತ್ರೆಗೆ ಸ್ಮಾರಕಗಳು ಮೈಲುಗಲ್ಲುಗಳಾದರೆ, ಶಾಸನಗಳು ಆಧಾರಸ್ತಂಭಗಳಾಗಿವೆ ಎಂದು ಹಿರಿಯ ಸಾಹಿತ್ಯಿಕ ಹಾಗೂ ಸಂಶೋಧಕರಾದ ಡಾ. ಬಸವರಾಜ ಭಾಗಾ ಅಭಿಪ್ರಾಯಪಟ್ಟರು.

ನಗರದ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ “ಪುಸ್ತಕ ಪರಿಚಯ” ಕಾರ್ಯಕ್ರಮದಲ್ಲಿ ಅವರು ಲೇಖಕರಾದ ಡಾ. ವೀರಶೆಟ್ಟಿ ಗಾರಂಪಳ್ಳಿ ರಚಿಸಿರುವ “ಗತಕಥನ: ಸಕೀರ್ಣ” ಕೃತಿಯ ಅವಲೋಕನ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಇಂದಿನ ಸಂದರ್ಭದಲ್ಲಿ ಶಾಸನಗಳ ಅಧ್ಯಯನ ಮತ್ತು ಸಂಶೋಧನೆಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪ್ರಮಾಣದಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೂ ಅಗತ್ಯವಿದೆ ಎಂದು ಹೇಳಿದರು.

“ಗತಕಥನ: ಸಕೀರ್ಣ” ಕೃತಿಯಲ್ಲಿನ ಒಂಬತ್ತು ಐತಿಹಾಸಿಕ ಲೇಖನಗಳು ಸಮಗ್ರ ಅಧ್ಯಯನಾಧಾರಿತವಾಗಿದ್ದು, ಲೇಖಕರು ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಅನೇಕ ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಕ್ಷೇತ್ರಕಾರ್ಯ ನಡೆಸಿರುವುದು ಶ್ಲಾಘನೀಯ. ಈ ಕೃತಿ ಆಧಾರಸಹಿತವಾದ ಮಹತ್ವದ ಆಕರ ಗ್ರಂಥವಾಗಿದೆ ಎಂದು ಹೇಳಿದರು.

ಲೇಖಕರಾದ ಡಾ. ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ನಮ್ಮ ಗಮನಕ್ಕೆ ಬಾರದ ಅನೇಕ ವೀರಗಲ್ಲುಗಳು ಹಾಗೂ ಶಾಸನಗಳು ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಅಡಗಿವೆ. ಅವುಗಳ ಕುರಿತು ಸಮಗ್ರ ಕ್ಷೇತ್ರಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಇತಿಹಾಸದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆ ವಹಿಸಿದ್ದರು. ಸಂಚಾಲಕರಾದ ಡಾ. ವಿಜಯಕುಮಾರ ಪರುತೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ. ಶ್ರೀಶೈಲ ನಾಗರಾಳ, ಡಾ. ಗವಿಸಿದ್ಧಪ್ಪ ಎಚ್. ಪಾಟೀಲ್, ಡಾ. ಶರಣಬಸಪ್ಪ ವಡ್ಡನಕೇರಿ, ಡಾ. ಸಿದ್ಧಪ್ಪ ಹೊಸಮನಿ, ಡಾ. ರಾಜಕುಮಾರ ಮಾಳಗೆ, ಡಾ. ಸಿದ್ರಾಮಯ್ಯ ಮಠ, ಶ್ರೀ ರೇವಣಸಿದ್ಧಪ್ಪ ದುಕಾನ, ಶ್ರೀ ರಾಜೇಂದ್ರ ಝಳಕಿ, ಪ್ರೋ. ಶ್ರೀಶೈಲ ಮದಾಣಿ ಸೇರಿದಂತೆ ಹಲವು ಸಾಹಿತಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News