ಕಲಬುರಗಿ | ಮಳೆಗೆ ಜಲಾವೃತಗೊಂಡ ಮನೆಗಳಿಗೆ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಭೇಟಿ
ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಬೆನಕನಳ್ಳಿ ಗ್ರಾಮದ ಮನೆಗಳಿಗೆ ನೀರು ನುಗ್ಗಿರುವ ಪ್ರದೇಶಗಳಿಗೆ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಮತ್ತು ಬಿಜೆಪಿ ಮುಖಂಡ ಜೆ.ಕೆ.ಪಾಟೀಲ್ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಬಾಲರಾಜ್ ಗುತ್ತೇದಾರ್, ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಗ್ರಾಮದ ಹೊಸ ಬಡಾವಣೆಯ ಮನೆಗಳು ಜಲಾವೃತವಾಗಿದ್ದು, ಹಲವು ಮನೆಗಳಲ್ಲಿ ನೀರು ನುಗ್ಗಿವೆ. ಮಳೆ ಬಂದರೆ ಗ್ರಾಮದ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಾರೆ. ಮನೆ ಹಾನಿ, ಬೆಳೆಹಾನಿ, ದಿನನಿತ್ಯ ಬಳಸುವ ವಸ್ತುಗಳು ಹಾನಿಯಿಂದ ಬೇಸತ್ತು ಹೋಗಿದ್ದಾರೆ. ಅಲ್ಲದೆ ಕಳೆದೆರಡು ವರ್ಷಗಳಿಂದ ಯಾವುದೇ ಪರಿಹಾರವು ನೀಡುತ್ತಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ನಷ್ಟವಾಗಿರುವ ಸಾಮಗ್ರಿಗಳಿಗೆ ಪರಿಹಾರ ನೀಡಬೇಕು ಹಾಗೂ ಪ್ರತಿಬಾರಿ ಹೆಚ್ಚಿನ ಮಳೆ ಬಂದರೆ, ಗ್ರಾಮದ ಹೊಸ ಬಡಾವಣೆಯ ಮನೆಗಳು ಜಲಾವೃತವಾಗಿತ್ತಿದ್ದು, ಈ ರೀತಿ ಆಗದಂತೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗುತ್ತೇದಾರ್ ಒತ್ತಾಯಿಸಿದ್ದಾರೆ.