ಕಲಬುರಗಿ | ಕಟ್ಟಿಸಂಗಾವಿ ಸೇತುವೆ ಜಲಾವೃತ : ರಾಷ್ಟ್ರೀಯ ಹೆದ್ದಾರಿ ಬಂದ್
ಕಲಬುರಗಿ: ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ 3.50 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವ ಪರಿಣಾಮ, ಭೀಮಾ ನದಿಯ ಪ್ರವಾಹ ರಾತ್ರೋರಾತ್ರಿ ಭಾರೀ ಅರ್ಭಟ ತಾಳಿದೆ. ಇದರ ಪರಿಣಾಮವಾಗಿ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
ಶನಿವಾರ ರಾತ್ರಿ ಸೇತುವೆ ಸಮೀಪ ನೀರು ಹರಿಯುತ್ತಿದ್ದರೆ, ಪ್ರವಾಹ ಹೆಚ್ಚಿದ ಪರಿಣಾಮ ರವಿವಾರ ಬೆಳಗಿನ ಜಾವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಬೀದರ್–ಬೆಂಗಳೂರು–ಶ್ರೀರಂಗಪಟ್ಟಣವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.
ಮುಂಜಾಗ್ರತಾ ಕ್ರಮವಾಗಿ ಸೇತುವೆಯ ಮೇಲೆ ಭಾರೀ ವಾಹನ ಸಂಚಾರವನ್ನು ಈಗಾಗಲೇ ನಿಷೇಧಿಸಲಾಗಿತ್ತು. ಆದರೆ ಇದೀಗ ಸೇತುವೆಯೇ ಜಲಾವೃತಗೊಂಡಿರುವುದರಿಂದ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ವಾಹನಗಳ ಸಂಚಾರಕ್ಕೂ ಬ್ರೇಕ್ ಬಿದ್ದಿದೆ. ದೂರ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಸಾಲು ಸಾಲು ನಿಂತ ವಾಹನಗಳು :
ಸೇತುವೆ ಮುಳುಗುವ ಹಂತದಲ್ಲೇ ಸಂಚಾರ ನಿಷೇಧಿಸಿದ್ದರಿಂದ ಕಲಬುರಗಿ–ಜೇವರ್ಗಿ ಮಾರ್ಗದಲ್ಲಿ ಟ್ರಕ್, ಕ್ಯಾಂಟರ್, ಬಸ್, ಕಾರು ಹಾಗೂ ಗೂಡ್ಸ್ ವಾಹನಗಳು ಸಾಲು ಸಾಲಾಗಿ ನಿಂತಿವೆ. ವಾಹನ ಚಾಲಕರು ಊಟ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ.