×
Ad

ಕಲಬುರಗಿ | ಭಾಷೆ ಹಾಗೂ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ : ಪ್ರೊ.ಹಾಷಿಮ ಬೇಗ್ ಮಿರ್ಜಾ

Update: 2025-09-23 21:13 IST

ಕಲಬುರಗಿ: ಭಾಷೆ ಹಾಗೂ ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಹಿಂದಿ ಭಾಷೆ ಎಲ್ಲರನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ ಎಂದು ಮಹಾರಾಷ್ಟ್ರದ ನಳದುರ್ಗದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಪಿಜಿ ಕಾಲೇಜಿನ ಪ್ರೊ. ಹಾಷಿಮ ಬೇಗ್ ಮಿರ್ಜಾ ಅಭಿಪ್ರಾಯಪಟ್ಟರು.

ಅವರು ಖ್ವಾಜಾ ಬಂದಾನವಾಜ ವಿಶ್ವವಿದ್ಯಾಲಯದ ಹಿಂದಿ ವಿಭಾಗದಿಂದ ಆಯೋಜಿಸಲ್ಪಟ್ಟ ಹಿಂದಿ ದಿವಸ್ ಪಕ್ವಾಡಾ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರತಿ ವರ್ಷ ಸೆ.14 ರಂದು ಹಿಂದಿ ದಿವಸ್ ಆಚರಿಸಲಾಗುತ್ತಿದ್ದು, ಇದು ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿರುವುದನ್ನು ಸ್ಮರಿಸುತ್ತದೆ. ಹಿಂದಿ ಕೇವಲ ಭಾಷೆಯಲ್ಲ, ಇದು ರಾಷ್ಟ್ರೀಯ ಏಕತೆಯ ಸಂಕೇತ. ನಮ್ಮ ಸಂಸ್ಕೃತಿ, ಇತಿಹಾಸ, ಮೌಲ್ಯಗಳನ್ನು ಪ್ರತಿಬಿಂಬಿಸುವ ಹಿಂದಿಯನ್ನು ಮಾತನಾಡಲು ಮತ್ತು ಕಲಿಯಲು ನಾವು ಹೆಮ್ಮೆ ಪಡಬೇಕು ಎಂದರು.

ಅಮೀರ್ ಖುಸ್ರೋ ಹಾಗೂ ಖಾಜಾ ಬಂದಾನವಾಜರ ಹಿಂದಿ ಭಾಷೆಗೆ ನೀಡಿದ ಕೊಡುಗೆಗಳನ್ನು ಅವರು ಸ್ಮರಿಸಿದರು.

ಕಾರ್ಯಕ್ರಮದ ವಿಶೇಷ ಅತಿಥಿ ಕೆಬಿಎನ್ ವಿಶ್ವವಿದ್ಯಾಲಯದ ಕುಲಸಚಿವ ಮಿರ ವಿಲಾಯತ ಅಲಿ, ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ಆಯೋಜಕರನ್ನು ಶ್ಲಾಘಿಸಿದರು. ಎಲ್ಲ ಭಾಷಾ ವಿಭಾಗಗಳು ಕವಿ ಗೋಷ್ಠಿ ಮುಂತಾದ ಕಾರ್ಯಕ್ರಮಗಳ ಮೂಲಕ ಭಾಷಾ ನಿಕಾಯವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಡೀನ್ ಪ್ರೊ. ನಿಶಾತ್ ಆರೀಫ್ ಹುಸ್ಸೇನಿ, ಮಾನವ ಮನಸ್ಸು ಮತ್ತು ಭಾಷೆಗಳ ನಡುವಿನ ತಳುಕಿನ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು. ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಜೊತೆಗೆ ಅಧ್ಯಾಪಕರೂ ಪಾಲ್ಗೊಂಡಿರುವುದನ್ನು ಅವರು ಮೆಚ್ಚಿದರು.

ಕಾರ್ಯಕ್ರಮದಲ್ಲಿ ಹಿಂದಿ ದಿವಸ್ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸಿಯುಕೆ ವಿದ್ಯಾರ್ಥಿನಿ ಪೂನಂ ಶರ್ಮಾ, ಡಾ. ನಮ್ರತಾ, ಡಾ.ಸೈಯದ್‌ ಅಬ್ರಾರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಾಮಿಯಾ ಪ್ರಾರ್ಥನೆ ಸಲ್ಲಿಸಿದರು, ಡಾ.ಮಿಲನ ಬಿಷ್ಣೋಯ್ ನಿರೂಪಿಸಿದರು, ಡಾ.ಅಪ್ಶನ್ ದೇಶಮುಖ ಪರಿಚಯ ಮಾಡಿಕೊಟ್ಟರು ಮತ್ತು ಡಾ.ಭಾರತಿ ವಂದಿಸಿದರು.

ಕಾರ್ಯಕ್ರಮದಲ್ಲಿ ಕಲೆ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ, ವಿಜ್ಞಾನ, ಶಿಕ್ಷಣ ಮತ್ತು ಕಾನೂನು ನಿಕಾಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News