ಕಲಬುರಗಿ | ಅಂದೋಲಾಶ್ರೀ 'ಕೈ' ಸದಸ್ಯತ್ವ ಪಡೆದು ಮಾತನಾಡಲಿ : ಶಿವಾನಂದ ಹೊನಗುಂಟಿ
ಕಲಬುರಗಿ: ಅಂದೋಲಾಶ್ರೀಗಳು ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆಯ ಕುರಿತು ಮಾತನಾಡುತ್ತಿರುವುದು ಯಾಕೆ ? ಒಂದು ವೇಳೆ ಪಕ್ಷದೊಳಗಿನ ಆಂತರಿಕ ವಿಷಯಗಳ ಕುರಿತು ಪ್ರಶ್ನೆ ಕೇಳುವುದಾದರೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದು ಕೇಳಲಿ ಎಂದು ಯುವ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಶಿವಾನಂದ ಹೊನಗುಂಟಿ ಸವಾಲು ಹಾಕಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದೋಲಾ ಸ್ವಾಮಿ, ಉದ್ದೇಶಪೂರ್ವಕವಾಗಿ ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧವೇ ಮಾತನಾಡುತ್ತಿದ್ದಾರೆ. ತಮ್ಮ ಸ್ವಂತ ತಾಲೂಕಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವಾದಾಗ ಧ್ವನಿಯೆತ್ತದೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮಿಲಿಂದ್ ಕಾಲೇಜಿನಲ್ಲಿ ಬದಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯುತ್ತಿದ್ದ ಸಂಪೂರ್ಣ ಪಾಟೀಲ್ ಅವರು 2023ರಲ್ಲಿ ಯುವ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಏಳೆಂಟು ತಿಂಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ದಾಖಲಾತಿಗಳಲ್ಲಿ ವ್ಯತ್ಯಾಸಗಳಿದ್ದು, ಅವುಗಳ ಬಗ್ಗೆ ಯುವ ಕಾಂಗ್ರೆಸ್ ಚುನಾವಣೆ ನೇತೃತ್ವ ವಹಿಸಿದ್ದ ತಂಡದ ಗಮನಕ್ಕೆ ತರಲಾಗಿದ್ದು, ಚುನಾವಣಾ ಗುರುತಿನ ಚೀಟಿಯಲ್ಲಿ ಜನ್ಮ ದಿನಾಂಕ 1991 ಇದ್ದಿರುವುದರಿಂದ ಅದರ ಪ್ರಕಾರ ನಾಮಪತ್ರ ಹಾಕಲಾಗಿತ್ತು, ಆದರೆ ಯಾರಾದರು ಪ್ರತಿಸ್ಪರ್ಧಿಗಳು ಪ್ರಶ್ನಿಸಿದರೆ ನಾಮಪತ್ರ ತಿರಸ್ಕರಿಸಬಹುದಾಗಿತ್ತು ಯಾರು ಪ್ರಶ್ನಿಸದ ಪ್ರಯುಕ್ತ ಚುನಾವಣೆ ನಡೆದು ಅಧ್ಯಕ್ಷರಾಗಿದ್ದಾರೆ. ಇದರಲ್ಲಿ ಸಚಿವರ ಯಾವುದೇ ಪಾತ್ರವಿಲ್ಲವೆಂದು ತಿಳಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ ಸರಡಗಿಯವರು ಮಾತನಾಡಿ, ಯುವ ಕಾಂಗ್ರೆಸ್ ಚುನಾವಣೆಯ ಘಟಕ ನಡೆಸುವ ಎಲ್ಲಾ ಪ್ರಕ್ರಿಯೆಗಳು ಪಾಲಿಸಲಾಗಿದ್ದು, ದಾಖಲಾತಿಗಳಲ್ಲಿ ವ್ಯತ್ಯಾಸವಿದ್ದಿದ್ದು ನಿಜ, ನಾನು ಹಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರೀಯವಾಗಿ ಕೆಲಸ ಮಾಡಿರುವುದರಿಂದ ಯುವ ಕಾಂಗ್ರೆಸ್ ಸದಸ್ಯರು ಮತ್ತು ಪಕ್ಷದ ಮುಖಂಡರು ನನಗೆ ಸ್ಪರ್ಧೆಯಲ್ಲಿ ಮತಹಾಕಿ ಗೆಲ್ಲಿಸಿದ್ದಾರೆ, ಜೊತೆಗೆ ನನ್ನ ಹತ್ತನೆ ತರಗತಿಯ ಅಂಕಪಟ್ಟಿಯನ್ನು ಅಂದೋಲಾಶ್ರೀಗಳಿಗೆ ತಲುಪಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಅಮರ ಶಿರವಾಳ, ಮಿಸ್ತ್ರೀ ಶರಫುದ್ದೀನ್ ಮತ್ತಿತರರು ಇದ್ದರು.