Kalaburagi | ಅ.15ರಂದು ‘ಮಹ್ಫಿಲ್-ಎ-ಹಾಜಿರಿ’ ನಾತಿಯಾ ಮುಶಾಯಿರಾ ಆಯೋಜನೆ
ಕೆಬಿಎನ್ ದರ್ಗಾದಲ್ಲಿ ಖ್ಯಾತ ಶಾಯರ್ಗಳಿಂದ ನಾತ್ ಕಾವ್ಯಪಠಣ
ಕಲಬುರಗಿ: ಹಝರತ್ ಡಾ. ಸೈಯದ್ ಶಾ ಗೆಸುದರಾಜ್ ಖುಸ್ರೋ ಹುಸೈನಿ ಮುಹಮ್ಮದ್ ಅಕ್ಬರ್ ಅಲ್-ಹುಸೈನಿ ಅವರ ಉರ್ಸ್ ಅಂಗವಾಗಿ ಗುರುವಾರ ಕೆಬಿಎನ್ ಆಡಳಿತ ಮಂಡಳಿ ಹಾಗೂ ಖ್ವಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಉರ್ದು ವಿಭಾಗದ ವತಿಯಿಂದ ದರ್ಗಾ ಆವರಣದಲ್ಲಿ ‘ಮಹ್ಫಿಲ್-ಎ-ಹಾಜಿರಿ’ ನಾತಿಯಾ ಮುಶಾಯಿರಾ ಆಯೋಜಿಸಲಾಗಿದೆ.
ಸಂಜೆ 8 ಗಂಟೆಗೆ ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಖ್ಯಾತ ಶಾಯರ್‌ಗಳು ಪ್ರವಾದಿ ಹಝರತ್ ಮುಹಮ್ಮದ್ (ಸ.ಅ.) ಅವರ ಸ್ತುತಿಯಲ್ಲಿ ರಚಿಸಲಾದ ನಾತ್ ಶರೀಫ್‌ಗಳನ್ನು ಪ್ರಸ್ತುತಪಡಿಸಲಿದ್ದಾರೆ.
ದರ್ಗಾದ ಸಜ್ಜಾದಾ ನಶೀನ್, ಖ್ವಾಜಾ ಬಂದೇ ನವಾಝ್ ವಿಶ್ವವಿದ್ಯಾಲಯದ ಕುಲಪತಿ, ಖ್ವಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಡಾ. ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಬಿಎನ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ದೇಶಕ ಹಾಗೂ ಖ್ವಾಜಾ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಡಾ.ಸೈಯದ್ ಮುಸ್ತಫಾ ಹುಸೈನಿ ಸಾಹೇಬ್ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ.
ಖ್ಯಾತ ಶಾಯರ್‌ಗಳಾದ ನಸೀಮ್ ನವಾಝ್ (ಅಮರಾವತಿ), ಜಾವೇದ್ ನಸೀಮಿ (ರಾಂಪುರ), ಅಝರ್ ಇನಾಯತಿ (ರಾಂಪುರ), ಜಮೀಲ್ ಅಹ್ಮದ್ ರಾಹಿ ಬಸ್ತವಿ (ಅಯೋಧ್ಯೆ), ಖಾಝಿ ಫಾರೂಕ್ ಆರಿಫಿ (ಹೈದರಾಬಾದ್), ಸರ್ಡಾರ್ ಸಲೀಮ್ (ಹೈದರಾಬಾದ್), ಜಲೀಲ್ ಬುರ್ಹಾನ್‌ಪುರಿ (ಜಲಗಾಂವ್), ಅಫ್ಜಲ್ ಮಂಗಳೋರಿ (ಡೆಹ್ರಾಡೂನ್), ನೂರುದ್ದೀನ್ ನೂರ್ (ಗುಲ್ಬರ್ಗಾ), ಖ್ವಾಜಾ ಸೈಯದ್ ಅಬೂ ತುರಾಬ್ ಶಾ ಖಾದ್ರಿ, ಚಿಶ್ತಿ ಯಮಾನಿ ಬಂದೇನವಾಜಿ (ಹಲಕಟ್ಟಾ), ಅಕ್ಬರ್ ಖಾನ್ ಅಕ್ಬರ್ (ಹೈದರಾಬಾದ್), ಖಾರಿ ತಯ್ಯಬ್ ಪಾಶಾ ಖಾದ್ರಿ (ಹೈದರಾಬಾದ್), ಯೂಸುಫ್ ಶೇಖ್ ಹಾಗೂ ಸಾಖಿ ಸರ್ಮಸ್ತ್ (ಗುಲ್ಬರ್ಗಾ) ಭಾಗವಹಿಸಲಿದ್ದಾರೆ.
ಈ ನಾತಿಯಾ ಮುಶಾಯಿರಾ ಪ್ರವಾದಿ ಪ್ರೇಮ, ಸೂಫಿ ಪರಂಪರೆ ಹಾಗೂ ಉರ್ದು ಸಾಹಿತ್ಯದ ಶ್ರೀಮಂತಿಕೆಯನ್ನು ಸಾರುವ ವೇದಿಕೆಯಾಗಲಿದೆ. ನಾತ್ ಶರೀಫ್ ಕಾವ್ಯಪಠಣದ ಮೂಲಕ ಭಕ್ತಿ, ಆಧ್ಯಾತ್ಮಿಕತೆ ಮತ್ತು ಸಾಹಿತ್ಯದ ಸೊಗಡನ್ನು ಪರಿಚಯಿಸುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.