×
Ad

ಕಲಬುರಗಿ| ಅ.12ರಂದು 'ನಮ್ಮ ಸಂವಿಧಾನ, ಮದರಸಾಗಳ ಸಂರಕ್ಷಣೆ'ಯ ಕುರಿತು ಬೃಹತ್ ಬಹಿರಂಗ ಸಭೆ: ಸಿರಾಝುದ್ದೀನ್ ಜಿಯಾಯಿ

Update: 2025-10-10 16:45 IST

ಕಲಬುರಗಿ: ಝಮಿಯತ್ ಉಲಮಾ ಇ ಹಿಂದ್ ವತಿಯಿಂದ ಇದೇ ಅ.12 ರಂದು ಸಂಜೆ 7ಗಂಟೆಗೆ ಇಲ್ಲಿನ ನ್ಯಾಷನಲ್ ಕಾಲೇಜಿನ ಆವರಣದಲ್ಲಿ 'ನಮ್ಮ ಸಂವಿಧಾನ ಹಾಗೂ ಮದರಸಾಗಳ ಸಂರಕ್ಷಣೆ'ಯ ಕುರಿತಾಗಿ ಬೃಹತ್ ಬಹಿರಂಗ ಸಭೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಸಿರಾಝುದ್ದೀನ್ ಜಿಯಾಯಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಝಮಿಯತ್ ಉಲಮಾ ಇ ಹಿಂದ್ ನ ರಾಷ್ಟ್ರೀಯ ಉಪಾಧ್ಯಕ್ಷ ಹಜರತ್ ಮೌಲಾನಾ ಸೈಯದ್‌ ಅಸ್ಜದ್ ಮದನಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನಾ ಮಾಸೂಮ್ ಸಾಕೀಬ್ ಅವರು ಉಪಸ್ಥಿತರಿರಲಿದ್ದು, ಸಂವಿಧಾನ ಹಾಗೂ ಮದರಸಾಗಳ ಸಂರಕ್ಷಣೆಯ ಕುರಿತಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

1919ರಲ್ಲಿ ಸ್ಥಾಪನೆಯಾದ ಈ ಸಂಘಟನೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿತ್ತು. ಅಲ್ಲಿಂದ ಇಲ್ಲಿಯತನಕ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಪ್ರಕೃತಿ ವಿಕೋಪದಲ್ಲಿ ತೊಡಗಿ ಸ್ವಯಂ ಸೇವೆ, ಸಂತ್ರಸ್ತರಿಗೆ ಪರಿಹಾರ ಸಹ ಕೊಟ್ಟಿದೆ. ಈಗ ನಮ್ಮ ಸಂಘಟನೆ ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಈಗಾಗಲೇ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ವರೆಗೆ ನೆರವು ನೀಡಿದೆ ಎಂದು ಹೇಳಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್ ರಝಾಕ್ ಖಾಸ್ಮಿ ಮಾತನಾಡಿ, ಝಮಿಯತ್ ಉಲಮಾ ಇ ಹಿಂದ್ ಸಂಘಟನೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿದೆ, ದುಶ್ಚಟಗಳಿಂದ ದೂರ ಉಳಿಯುವಂತೆ ಯುವಜನತೆಯರಲ್ಲಿ ಅರಿವು ಮೂಡಿಸಲಾಗುತ್ತಿದೆ, ಅದರಂತೆಯೇ ಕೆಲವು ಜನರಲ್ಲಿ ಮದರಸಾಗಳ ಬಗ್ಗೆ ತಪ್ಪು ಕಲ್ಪನೆ ಇದೆ, ಹಾಗಾಗಿ ಆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಹಬಾಜ್ ಹುಸೇನ್ ಇನಾಮದಾರ, ಮೌಲಾನಾ ಏಜಾಜ್ ಅಹ್ಮದ್ ಖಾಸ್ಮಿ, ಮೆರಾಜ್, ಫಿರೋಜ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News