ಕಲಬುರಗಿ | ಗ್ರಾಮ ಪಂಚಾಯತ್‌ಗಳಲ್ಲಿ ಅನುದಾನ ದುರ್ಬಳಕೆ: ಸೂಕ್ತ ಕ್ರಮಕ್ಕೆ ಅರ್ಜುನ್ ಭದ್ರೆ ಆಗ್ರಹ
ಕಲಬುರಗಿ: ಜಿಲ್ಲೆಯಲ್ಲಿ ಅಭಿವೃದ್ಧಿಗೆ ಬಂದ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ, ವಿಶೇಷವಾಗಿ ಗ್ರಾಮ ಪಂಚಾಯತ್‌ಗಳಲ್ಲಿ 14ನೇ ಮತ್ತು 15ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಬಂದಿರುವ ಅನುದಾನ ದುರ್ಬಳಕೆ ಆಗುತ್ತಲಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಕಲಬುರಗಿ ತಾಲೂಕಿನಲ್ಲಿ ಸುಮಾರು 28 ಗ್ರಾಮ ಪಂಚಾಯತ್‌ಗಳು ಬರುತ್ತವೆ. ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ, ಹಾಗರಗಾ ಗ್ರಾಮ ಪಂಚಾಯತ್‌ನಲ್ಲಿ 2022-23ನೇ ಸಾಲಿನಲ್ಲಿ ಅಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾರು 60 ಲಕ್ಷ ರೂ.ಗಳ ಕಾಮಗಾರಿಗಳನ್ನು ಮಾಡದೇ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಅವ್ಯವಹಾರ ನಡೆಸಿದ ಅಧಿಕಾರಿಗಳನ್ನು ಕೂಡಲೇ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕು. ಒಂದು ವೇಳೆ ಕ್ರಮ ಜರುಗಿಸದೇ ವರ್ಗಾವಣೆ ಮಾಡದೇ ಹೋದರೆ ತಾಲೂಕು ಪಂಚಾಯತ್ ಕಾರ್ಯಾಲಯದ ಎದುರುಗಡೆ, ನಿರಂತರವಾದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೂರ್ಯಕಾಂತ ಅಜಾದಪೂರ, ಮಲ್ಲಿಕಾರ್ಜುನ ಖನ್ನಾ, ಮಹೇಶ ಕೋಕಿಲೆ ಮತ್ತಿತರರು ಉಪಸ್ಥಿತರಿದ್ದರು.