ಕಲಬುರಗಿ | ಆಳಂದ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣದ ಟೆಂಡರ್‌ಗೆ ಶಾಸಕ ಬಿ.ಆರ್.ಪಾಟೀಲ್ ಸೂಚನೆ
ಕಲಬುರಗಿ: ಆಳಂದ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ ತಕ್ಷಣ ಅಂದಾಜು ಪಟ್ಟಿ ತಯಾರಿಸಿ, ಟೆಂಡರ್ ಕರೆದು ಕಾಮಗಾರಿಯನ್ನು ತ್ವರಿತಗೊಳಿಸಲು ಶಾಸಕರೂ ಆಗಿರುವ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಆಳಂದ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರ ಸಮ್ಮುಖದಲ್ಲಿ ನಡೆದ ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆ ಅಗಲೀಕರಣಕ್ಕೆ 4.90 ಕೋಟಿ ರೂ. ಅನುಮೋದನೆ ಹಂತದಲ್ಲಿದ್ದು, ಇದರಿಂದ ಸಂಚಾರ, ವ್ಯಾಪಾರ ಮತ್ತು ವಹಿವಾಟಿಗೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಶ್ರೀರಾಮ ಮಾರುಕಟ್ಟೆಯ ಹಳೆಯ ಕಟ್ಟಡ ತೆರವಿಗೆ ಮತ್ತು ಮೂರಂತಸ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಇಂದಿರಾ ಕ್ಯಾಂಟಿನ್ ಶೀಘ್ರ ಆರಂಭಕ್ಕೆ ಕ್ರಮ, ಕರ್ತವ್ಯ ಲೋಪದ ಸಿಬ್ಬಂದಿಗಳ ಮೇಲೆ ಕ್ರಮ, ತೆರೆದ ಬಾವಿಗಳ ಸ್ವಚ್ಛತೆ, ಮತ್ತು ಖಾಸಗಿ ಆಸ್ತಿಗಳ ಆನ್‌ಲೈನ್ ನೋಂದಣಿಗೆ ಸೂಚಿಸಿದರು. ಪುರಸಭೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಆಸ್ತಿ ತೆರಿಗೆ ವಸೂಲಿಗೆ ಒತ್ತು ನೀಡಲು ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿಗೆ ತಿಳಿಸಿದರು.
ಆಳಂದ ಪಟ್ಟಣದಲ್ಲಿ 10 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಡಿಸಿ ಸೂಚನೆ ನೀಡಿದರು.
ಪುರಸಭೆ ಸಿಬ್ಬಂದಿಗಳು ಬಡಾವಣೆ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ದೂರಿದರು. ಡಿಸಿ ಮತ್ತು ಶಾಸಕರು, ಅಧಿಕಾರಿಗಳು ಮತ್ತು ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಿ, ದೂರುಗಳನ್ನು ವಾರದೊಳಗೆ ಇತ್ಯರ್ಥಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್.ನಾಯಕ, ನಗರಾಭಿವೃದ್ಧಿ ಅಧಿಕಾರಿ ದವಲಾ, ಪಿಡಬ್ಲೂಡಿ ಎಇಇ ಆನಂದಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ, ಜೆಸ್ಕಾ ಎಇಇ ಪ್ರಭು ಮಡ್ಡಿತೋಟ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.