×
Ad

ಕಲಬುರಗಿ: ಆಳಂದದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮುಸ್ಲಿಂ ಮುಖಂಡರು

Update: 2025-08-07 14:27 IST

ಕಲಬುರಗಿ: ಆಳಂದ ಪಟ್ಟಣದಲ್ಲಿ ಬುಧವಾರ ರಾತ್ರೋ ರಾತ್ರಿ ರಾಜಕೀಯ ವಲಯದಲ್ಲಿ ದೊಡ್ಡ ತಿರುವು ಪಡೆದುಕೊಂಡಿದ್ದು, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿಆರ್ ಪಾಟೀಲ್ ಬಳಗದ ಹಲವು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪಕ್ಷ ತ್ಯಜಿಸಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಆಳಂದ ಪಟ್ಟಣದ ಟಿಪ್ಪು ಸುಲ್ತಾನ್ ಚೌಕದಲ್ಲಿ ಬುಧವಾರ ನಡೆದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ, ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಾಯಕತ್ವವನ್ನು ಮೆಚ್ಚಿ 100ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. 

ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುಭಾಷ್ ಗುತ್ತೇದಾರ, ಹಿಂದಿನ ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯದ ವಿರುದ್ಧದ ವಿಷಯಗಳಲ್ಲಿ ನನ್ನ ಕಡೆಯಿಂದ ಹಾಗೂ ನನ್ನ ಮಕ್ಕಳ ಕಡೆಯಿಂದ ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಡೆಯಲು ನಾನು ಬಿಡುವುದಿಲ್ಲ. ಬಡವರ್ಗದ ಜನರಿಗೂ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.

ಬಿ.ಆರ್ ಪಾಟೀಲ್ ಅವರು ಆಳಂದದಲ್ಲಿ ಭ್ರಷ್ಟಾಚಾರ ಮಾಡಿ ಇಡೀ ತಾಲೂಕಿನಾದ್ಯಂತ ಹಣ ಲೂಟಿ ಹೊಡೆದಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಅವರು ನಿರ್ಲಕ್ಷ್ಯ ತೋರುತ್ತಾ ಬಂದಿದ್ದಾರೆ. ಹೇಳುವುದು ಅಭಿವೃದ್ಧಿ ಪರ ಕೆಲಸ, ಮಾಡೋದೆಲ್ಲ ಭ್ರಷ್ಟಾಚಾರ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವೇಳೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ, ಹೊಸದಾಗಿ ಸೇರ್ಪಡೆಯಾದ ಸಲೀಂ ಜಮಾದಾರ್ ಸೇರಿದಂತೆ ಮತ್ತಿತರರು ಮಾತನಾಡಿದರು.

ಆಳಂದ ಪಟ್ಟಣದ ಚೆಕ್ ಪೋಸ್ಟ್ ನಿಂದ ಟಿಪ್ಪು ಸುಲ್ತಾನ್ ಚೌಕ್ ವರೆಗೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ ಮತ್ತಿತರ ನಾಯಕರನ್ನು ಮೆರವಣಿಗೆ ಮೂಲಕ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಚೌಕ್ ಅಧ್ಯಕ್ಷ ಸೈಯದ್ ಝಾಕಿರ್ ಅಹಮದ್, ಸಲೀಮ್ ಜಮಾದಾರ್, ಫಯಾಜ್ ಪಟೇಲ್, ಸಮೀರ್ ಅನ್ಸಾರಿ, ಮಕದ್ದಮ್ ಸೈಯದ್ ಜಾಕೀರ್ ಅಹಮದ್, ಫಕ್ರುದ್ದೀನ್ ರೋಟೆ, ಅಶ್ಫಾಕ್ ಮುಲ್ಲಾನ್, ಫಯಾಜ್ ಪಟೇಲ್, ಸಾಹೇಬ್ ಲಾಲ್, ಮೊಹಮ್ಮದ್ ನಿಜಾಮ್, ಅನ್ಸಾರಿ, ಇಲಿಯಾಸ್ ಶೇಠ್, ಭಾಷಾ ಅನ್ವರ್, ಮೊಹಮ್ಮದ್ ರಫೀಕ್, ಚಾಂದ್ ಪಾಶ, ಹೈದರ್ ಸಾಬ್, ನೂರುದ್ದೀನ್, ಮನ್ಸೂರ್ ಸಾಬ್, ಮೆಹಬೂಬ್ ಪಾಶ, ಬಿಲಾವಲ್, ರುಕ್ಮದ್ದೀನ್, ಅಲ್ಲಾವುದ್ದೀನ್, ಅಜೀಂ ಪಾಶಾ, ಜೈನುದ್ದೀನ್, ಕುತ್ಬುದ್ದೀನ್ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News