×
Ad

ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ : ಅರ್ಹ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಮನವಿ

Update: 2025-10-09 21:38 IST

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಅರ್ಹತಾ ದಿನಾಂಕ ನ.1ರ, 2025ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿವಹಿಸಿ ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ಸೇಡಂ ತಹಶೀಲ್ದಾರರಾದ ಪ್ರಿಯಾಂಕ ಧನಶ್ರೀ ಅವರು ಮನವಿ ಮಾಡಿದ್ದಾರೆ.

ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ. 6 ಕೊನೆಯ ದಿನವಾಗಿದೆ. ಮತದಾರರ ಪರಿಷ್ಕರಣೆ ಭಾಗವಾಗಿ ಕರಡು ಮತದಾರರ ಪಟ್ಟಿಯನ್ನು ನ.25 ರಂದು ಪ್ರಕಟಿಸಿ, ಡಿ.10 ರೊಳಗೆ ಆಕ್ಷೇಪಣೆ ಅಹ್ವಾನಿಸಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು 2025ರ ಡಿ.30 ರಂದು ಪ್ರಕಟಿಸಲಾಗುತ್ತದೆ ಎಂದು ಮತದಾರರ ಪರಿಷ್ಕರಣೆ ಕಾರ್ಯದ ಬಗ್ಗೆ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷೇತ್ರಕ್ಕೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳು, ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು, ಕಲಬುರಗಿ ವಿಭಾಗದ ಆಯಾ ಉಪವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಸಹಾಯಕ ಆಯುಕ್ತರು, ವಿಭಾಗದ ಎಲ್ಲಾ ಸಂಬಂಧಪಟ್ಟ ತಹಶೀಲ್ದಾರರು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಈ ಕಚೇರಿಗಳಿಗೆ ಕಾಲಮಿತಿಯಲ್ಲಿ ಅರ್ಜಿ, ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿ ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತುಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ಮತದಾರರಿಗೆ ನೋಟಿಸ್ ನೀಡುತ್ತಾರೆ. ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರುಪಡಿಸದೆ ಇದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರು ಸಹ ಇದೀಗ ಪುನ: ನಮೂನೆ-19ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಹೆಸರು ಸೇರಿಸಲು ಅರ್ಹತೆ ಏನು? :

ಭಾರತದ ಪ್ರಜೆಯಾಗಿರುವ, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಹಾಗೂ 1ನೇ ನವೆಂಬರ್ 2025 ಕ್ಕೆ ಮೊದಲ 6 ವಷಗಳ ಅವಧಿಯಲ್ಲಿ ಸೆಕೆಂಡರಿ ದರ್ಜೆಯಲ್ಲಿ ಪ್ರೌಢ ಶಾಲೆಗಿಂತ ಕಡಿಮೆ ಇಲ್ಲದ ನಿರ್ಧಿಷ್ಟ ಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ಕನಿಷ್ಠ 3 ವರ್ಷ ಬೋಧನಾ ವೃತ್ತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಹೀಗಾಗಿ ಅರ್ಜಿಯೊಂದಿಗೆ ಶಾಲಾ ಸಂಸ್ಥೆಯಿಂದ ಅನುಬಂಧ-2ರಲ್ಲಿ ಪಡೆದ ಪ್ರಮಾಣ ಪತ್ರ ಲಗತ್ತಿಸಬೇಕು.

ಬಲ್ಕ್ ಅರ್ಜಿ ಸ್ವೀಕರಿಸಲ್ಲ :

ಖುದ್ದಾಗಿ ಅಥವಾ ಅಂಚೆ ಮುಖಾಂತರ ಒಟ್ಟಾರೆಯಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸುವುದಿಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಸಿಬ್ಬಂದಿಗಳ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು. ಬಲ್ಕ್ (ಗುಚ್ಚದ) ರೂಪದಲ್ಲಿ ಅರ್ಜಿ ಸ್ವೀಕರಿಸಲ್ಲ. ಕುಟುಂಬದ ಎಲ್ಲಾ ಸದಸ್ಯರ ಅರ್ಜಿಗಳನ್ನು ಕುಟುಂಬ ಯಾರಾದರು ಒಬ್ಬ ಸದಸ್ಯರು ಸಲ್ಲಿಸಬಹುದಾಗಿದೆ. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಪ್ರಜಾಪ್ರಾತಿನಿಧ್ಯ ಅಧಿನಿಯಮ-1950ರ 31 ನೇ ಪ್ರಕರಣದ ಮೇರೆಗೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಸೇಡಂ ತಹಶೀಲ್ದಾರರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News