ಕಲಬುರಗಿ | ರಂಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾಗಪ್ಪಯ್ಯ ಸ್ವಾಮಿಗಳಿಗೆ ಕಸಾಪದಿಂದ ಅಧಿಕೃತ ಆಹ್ವಾನ
ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎ.3ರಂದು ನಗರದ ಕನ್ನಡ ಭವನದ ಸಾಹಿತ್ಯ ಮಂಟಪದಲ್ಲಿ ಏರ್ಪಡಿಸಿರುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಚಿತ್ತಾಪೂರ ತಾಲೂಕಿನ ಆಳ್ಳೋಳ್ಳಿ ಗದ್ದುಗೆ ಮಠದ ನಾಗಪ್ಪಯ್ಯ ಮಹಾಸ್ವಾಮಿಗಳವರನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವದಲ್ಲಿ ಪದಾಧಿಕಾರಿಗಳೆಲ್ಲರೂ ಸೇರಿ ಫಲ ತಾಂಬೂಲ ಕೊಟ್ಟು ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಯಿತು.
ನಾಗಪ್ಪಯ್ಯ ಮಹಾಸ್ವಾಮಿಗಳು ಕಳೆದ ನಾಲ್ಕ ದು ದಶಕಗಳಿಂದ ತಮ್ಮ ಶ್ರೀಮಠದಲ್ಲಿ ಈ ಭಾಗದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾ.ನಾ.ಸಂ. ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಕಟ್ಟಿಕೊಂಡು ರಂಗಭೂಮಿ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದುಕೊoಡು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕೇವಲ ಮನರಂಜನೆಗಷ್ಟೇ ಅಲ್ಲದೇ ಬದುಕಿನ ಮೌಲ್ಯವನ್ನು ತಿಳಿಸಿಕೊಡುವುದು ನಾಟಕದ ಕಲೆ, ಮಾನವನಿಗೆ ಬದುಕಿನ ನೀತಿಪಾಠ ಕಲಿಸುವ ಶಾಲೆ ರಂಗಭೂಮಿ ಕ್ಷೇತ್ರವಾಗಿದೆ. ಇಂಥ ಪವಿತ್ರ ಕ್ಷೇತ್ರದ ಸಾಧಕರನ್ನು ಒಂಡೆದೆ ಸೇರಿಸುವ ಇನ್ನೊಂದು ಪ್ರಯತ್ನ ಪರಿಷತ್ ಮಾಡುತ್ತಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಇದೊಂದು ಹೊಸ ಪ್ರಯೋಗ ಎನ್ನಬಹುದಾಗಿದೆ ಎಂದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ನಾ.ನಾ. ಸಂ.ನ ಮುಖ್ಯಸ್ಥರೂ ಆದ ಅಳ್ಳೋಳ್ಳಿ ಗದ್ದುಗೆಮಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು, ಈ ಭಾಗದ ಕಲಾವಿದರು ಹಾಗೂ ಕಲೆಯನ್ನು ಉಳಿಸಿ-ಬೆಳೆಸುವ ಕಾರ್ಯ ಪರಿಷತ್ತು ಮಾಡುತ್ತಿದೆ. ಕಲಾವಿದರು ಈ ಸಮಾಜದ ನಿಜವಾದ ಸಂಪತ್ತಾಗಿದ್ದಾರೆ. ಕಳೆದ ಐದು ದಶಕಗಳಿಂದ ರಂಗಭೂಮಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಗುರುತಿಸಿ ಪರಿಷತ್ತು ನನಗೆ ಬಹು ದೊಡ್ಡ ಗೌರವ ಕೊಟ್ಟಿದೆ ಎಂದು ಸಂತೋಷ ವ್ಯಕ್ತಪಡಿಸಿದ ಅವರು, ಪ್ರತಿಭೆಗಳ ಆಗರವಾದ ಈ ಕಲ್ಯಾಣ ನೆಲ ಪ್ರತಿಭಾವಂತರ ನಾಡಾಗಿದೆ. ನಾಟಕಗಳು ಸಮಜದ ಪ್ರತಿಬಿಂಬವಾಗಿವೆ. ಸಮಾಜಕ್ಕೆ ಬಹು ದೊಡ್ಡ ಸಂದೇಶ ನೀಡುವ ಕಲಾವಿದರು ತಮ್ಮ ಬದುಕಿನಲ್ಲಿ ಅನೇಕ ಕಷ್ಟಗಳು ಇದ್ದರೂ, ಇದನ್ನು ಲೆಕ್ಕಿಸದೇ ಸಮಾಜಕ್ಕೆ ಸಂತೋಷವನ್ನುಂಟು ಮಾಡುವ ಕಲಾವಿದರು ಬಹು ಶ್ರೇಷ್ಠರಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಕಲ್ಯಾಣಕುಮಾರ ಶೀಲವಂತ, ರವೀಂದ್ರಕುಮಾರ ಭಂಟನಳ್ಳಿ, ಅಮೃತಪ್ಪ ಅಣೂರ, ಶಿವಾನಂದ ಸುರವಾಸೆ, ನರಸಿಂಗರಾವ ಹೇಮನೂರ, ಜ್ಯೋತಿ ಹಿರೇಮಠ, ಜ್ಯೋತಿ ಕೋಟನೂರ, ಶಿವಲೀಲಾ ಕಲಗುರ್ಕಿ, ಸವಿತಾ ನಾಸಿ, ಧರ್ಮರಾಜ ಜವಳಿ, ಹಣಮಂತಪ್ರಭು, ಡಾ.ಬಾಬುರಾವ ಶೇರಿಕಾರ, ಈರಣ್ಣ ಸೋನಾರ, ಮಲ್ಲಿನಾಥ ಸಂಗಶೆಟ್ಟಿ, ಮಾಣಿಕ ನಾಗಗುಂಡ, ಬಾಬುರಾವ ಪಾಟೀಲ, ಸೋಮಶೇಖರ ನಂದಿಧ್ವಜ, ವೀರಭದ್ರಪ್ಪ ಅರಿಕೇರಾ, ರೇವಣಸಿದ್ದಪ್ಪ ಜೀವಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.