ಕಲಬುರಗಿ | ಜು.13ರಂದು ಕುರುಬಗೊಂಡ ಸಮಾಜದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ : ಗುರುನಾಥ ಪೂಜಾರಿ
ಕಲಬುರಗಿ: ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘ ಹಾಗೂ ಕುರುಬಗೊಂಡ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಇದೇ ಜು.13 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ನಿವೃತ್ತ ಅಧಿಕಾರಿಗಳಿಗೆ ಗೌರವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಗುರುನಾಥ ಪೂಜಾರಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ, ಗೊಂಡ, ಕಾಡುಕುರುಬ, ಕುರುಬ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಸೆಸೆಲ್ಸಿ ಹಾಗೂ ಪಿ.ಯುಸಿ. ಶೇ.80 ಹೆಚ್ಚು ಅಂಕಗಳು ಪಡೆದ ಮಕ್ಕಳಿಗೆ ಮತ್ತು ಪ್ರಸ್ತುತ ಸಾಲಿನಲ್ಲಿ ಎಮ್.ಬಿ.ಬಿ.ಎಸ್. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ, ವಿವಿಧ ಇಲಾಖೆಯಲ್ಲಿ ನಿವೃತ್ತ ಅಧಿಕಾರಿಗಳಿಗೆ ಹಾಗೂ ಸಮುದಾಯದ ಪತ್ರಕರ್ತರುಗಳಿಗೆ ಸಂಘದ ವತಿಯಿಂದ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದರು.
ಅಂದು ನಗರದ ಸಂಗಮೇಶ್ವರ ಸಭಾಗೃಹದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯ ಸಿದ್ದಾರಾಮನಂದ ಮಹಾ ಸ್ವಾಮಿಜೀ ಮತ್ತು ಲಿಂಗಬೀರದೇವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮ ಪ್ರಭು ಪಾಟೀಲ್ ನೆರವೇರಿಸಲಿದ್ದಾರೆ.
ಸಮಾಜ ಬಾಂಧವರು, ಯುವಕರು, ಮಹಿಳೆಯರು, ಚಿಂತಕರು, ಪಾಲಕರು, ಸಂಘದ ಅಧೀನದಲ್ಲಿರುವ ಇನ್ನುಳಿದ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಿಲೀಪ್ ಪಾಟೀಲ್, ಲಿಂಗರಾಜ ಬಿರಾದಾರ, ಧರ್ಮರಾಜ ಹೇರೂರು, ನಾಗೇಂದ್ರಪ್ಪ ಪೂಜಾರಿ, ನಿರ್ಮಲಾ ಬರಗಾಲಿ ಮತ್ತಿತರರು ಉಪಸ್ಥಿತರಿದ್ದರು.