ಕಲಬುರಗಿ | ಮಾದಕ ವಸ್ತುಗಳನ್ನು ಮುಕ್ತವಾಗಿಸುವುದೇ ನಮ್ಮ ಮೊದಲ ಗುರಿ: ಡಾ.ಶರಣಪ್ಪ ಎಸ್.ಡಿ.
ಕಲಬುರಗಿ: ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಮುಕ್ತವಾಗಿಸಿ ಉತ್ತಮ ಸಮಾಜ ರಚಿಸುವುದೇ ನಮ್ಮ ಮೊದಲ ಗುರಿ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೋಲಿಸ್, ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲಬುರಗಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಗತ್ ವೃತ್ತದಲ್ಲಿ ಕಾಲ್ನಡಿಗೆಯ ಜಾಥಾಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ನಮ್ಮ ನಗರ ರಾಜ್ಯ, ದೇಶವು ಮಾದಕ ವಸ್ತುಗಳಿಂದ ಮುಕ್ತ ಆಗಬೇಕಾದರೆ, ಅಕ್ರಮ ಮಾದಕ ವಸ್ತು ಸಾಗಣಿಕೆ ವಿರುದ್ಧ ಎಲ್ಲ ಅಧಿಕಾರಿಗಳು ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಮಾಡಿದಾಗ ಹಾಗೂ ಬಳಕೆಯ ವಿರುದ್ಧ ಸಾರ್ವಜನಿಕರ ನಿರಂತರ ಹೋರಾಟದಿಂದ ಮಾತ್ರ ಮುಕ್ತ ಮಾದಕ ಸಮಾಜವನ್ನಾಗಿ ಪರಿವರ್ತಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಾಗನಹಳ್ಳಿ ರಾಜ್ಯ ಪೊಲೀಸ್ ಮಹಾವಿದ್ಯಾಲಯದ ಎಸ್.ಪಿ. ಹಾಗೂ ಪ್ರಾಂಶುಪಾಲರಾದ ಡೆಕ್ಕ ಕಿಶೋರ ಬಾಬು ಮಾತನಾಡಿ, ಮಾದಕ ವಸ್ತುಗಳು ಬಳಸುವುದರಿಂದ ಮನುಷ್ಯನ ಮೇಲೆ ಅನೇಕ ದುಷ್ಪರಿಣಾಗಳು ಬೀರುತ್ತವೆ. ಇದರ ವಿರುದ್ಧ ಪ್ರತಿಯೊಬ್ಬರು ಹೋರಾಡುವ ಮೂಲಕ ನಮ್ಮ ಮಕ್ಕಳನ್ನು ನಾವೇ ರಕ್ಷಿಸಿಕೊಳ್ಳಬೇಕಿದೆ ಎಂದರು.
ಡಿ.ಸಿ.ಪಿ.(ಕಾನೂನು ಸುವ್ಯವಸ್ಥೆ) ಕನಿಕಾ ಸಿಕ್ರಿವಾಲ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಿಸಿಪಿ ಪ್ರವೀಣ ನಾಯಕ್, ಅಬಕಾರಿ ಇಲಾಖೆಯ ಡಿ.ಸಿ. ಚಂದನ ಗೌಡ, ಎನ್.ಸಿ.ಸಿ. 32ನೇ ಬಟಾಲಿಯನ್ ಸಿಕೇಂದ್ರ ಸಿಂಗ್ ಸುಬೇದಾರ, ನಿವೃತ್ತ ಡಿ.ಎಸ್.ಪಿ. ನಾರಾಯಣ ಸ್ವಾಮಿ. ಇನ್‌ಸ್ಪೆಕ್ಟರ್ ಶಾಂತಿನಾಥ ಸೇರಿದಂತೆ ಪೊಲೀಸ್ ಇಲಾಖೆಯ ಸರ್ಕಲ್ ಇನ್‌ಸ್ಪೆಕ್ಟರ್, ಪೊಲೀಸ್ ಇಲಾಖೆ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು, ಎನ್.ಸಿ.ಸಿ. ಕಮಾಂಡೆಂಟ್‌ಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.