ಕಲಬುರಗಿ | ಸಿಜೆಐ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಪ್ರತಿಭಟನೆ
ಕಲಬುರಗಿ: ಸುಪ್ರೀಂ ಕೋರ್ಟಿನ ಸರ್ವೋಚ್ಚ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಆರ್. ಎಸ್. ಎಸ್. ಮನಸ್ಥಿತಿ ಕೋಮುವಾದಿ ವಕೀಲನೊಬ್ಬ ಕೋರ್ಟಿನ ಹಾಲಿನಲ್ಲಿ ಶೂ ಎಸೆದು ಅವಮಾನ ಮಾಡಿರುವುದನ್ನು ಖಂಡಿಸಿ ನಗರದ ದಲಿತ ಸಂಘಟನೆಗಳು ಹಾಗೂ ಮುಸ್ಲಿಂ ಫೋರಮ್ ಒಕ್ಕೂಟದ ವತಿಯಿಂದ ಶಹಾಬಾದ್ ನಗರದ ನೆಹರು ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ದಲಿತ ಮುಖಂಡ ಸುರೇಶ ಮೆಂಗನ್, ವಕೀಲ ರಾಜೇಶ್ ಕಿಶೋರ್ ಎಂಬಾತನನ್ನು ಬಂಧಿಸಿ ದೇಶದ್ರೋಹಿ ಎಂದು ಘೋಷಿಸಬೇಕು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆಯುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸುತ್ತೇವೆ. ಈ ಘಟನೆ ದೇಶಕ್ಕೆ ಮಾಡಿದ ಅವಮಾನವಾಗಿದೆ. ಅವನನ್ನು ಬಂಧಿಸಿ ಮತ್ತೆ ಬಿಡಲಾಗಿದೆ. ಲಡಾಕ್‍ನಲ್ಲಿ ಸೋನಮ್ ವಾಂಗ್‍ಚುಕ್ ಶಾಂತಿಯುತ ಪ್ರತಿಭಟನೆ ಮಾಡಿದರೆ ಅವರನ್ನು ದೇಶದ್ರೋಹಿ ಪಟ್ಟ ಕಟ್ಟಿ ಜೈಲಿಗೆ ಕಳಿಸಿದ್ದಾರೆ. ಆದರೆ, ಸುಪ್ರೀಂ ಕೋರ್ಟಿನ ಸರ್ವೋಚ್ಚ ನ್ಯಾಯಾಧೀಶರ ಮೇಲೆ ಶೂ ಎಸೆದವನಿಗೆ ಬಿಡುಗಡೆ ಮಾಡುತ್ತಾರೆ ಎಂದರೆ ಮೋದಿ ಸರಕಾರ ಕೋಮುವಾದಿ ಮತ್ತು ಜನವಿರೋಧಿ ಸರಕಾರ ಎಂದು ಸಾಬೀತುಪಡಿಸಿದೆ. ಕೂಡಲೇ ಅವನನ್ನು ಮತ್ತೆ ಬಂಧಿಸಬೇಕು. ಅವನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದರು.
ದಸಂಸ ಮುಖಂಡ ಪಿ.ಎಸ್.ಮೇತ್ರೆ ಹಾಗೂ ಜೆಡಿಎಸ್ ಪಕ್ಷದ ಅಧ್ಯಕ್ಷ ಅ.ಸಾಬೀರ ಮಾತನಾಡಿ, ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಅಧಿಪತ್ಯ ಸಾಧಿಸುತ್ತಿರುವ ಸಂಘ ಪರಿವಾರದವರು ನ್ಯಾಯಾಂಗವನ್ನೂ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸಿದ್ದಾರೆ. ಇದೇ ಮಾನಸಿಕತೆಯ ಜನರು ಸಂವಿಧಾನ ಬದಲಿಸುವ, ಮೀಸಲಾತಿ ರದ್ದುಪಡಿಸುವ ಮಾತುಗಳನ್ನೂ ಆಡಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಕುಣಿಯದ ನ್ಯಾಯಾಧೀಶರನ್ನು ಬೆದರಿಸಲು ಇಂತಹ ಕೃತ್ಯಗಳನ್ನು ವ್ಯವಸ್ಥಿತವಾಗಿ ಎಸಗಲಾಗುತ್ತಿದೆ. ದೇಶದ ಪ್ರಜಾತಂತ್ರ, ಸಂವಿಧಾನ, ನ್ಯಾಯಾಂಗದ ಅಸ್ತಿತ್ವ ಉಳಿಸಲು ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ ಎಂದರು.
ಹಿರಿಯ ಮುಖಂಡ ಡಿಡಿ ಓಣಿ ಮತ್ತು ಮುಹಮ್ಮದ್ ಮಸ್ತಾನ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಮಯೂರ, ಸತೀಶ ಕೋಬಾಳಕರ, ಯಲ್ಲಾಲಿಂಗ ಹೈಯ್ಯಾಳಕರ್, ವಸಂತ ಕಾಂಬಳೆ, ನಾಗರಾಜ ವಾಘಮಾರೆ, ಶ್ರೀಧರ ಕೊಲ್ಲೂರ, ಮಹೇಬೂಬ ಪಟೇಲ, ಸಾಜೀದ್ ಜಮಾದಾರ, ನರಸಿಂಹಲು ರಾಯಚೂರಕರ್, ನೀರಜ ಶರ್ಮಾ, ಮನೋಹರ, ವಸೀಂ ಅಹ್ಮದ್ ಭಾಗವಹಿಸಿದ್ದರು.