Kalaburagi | ಜೋಕುಮಾರ ಸ್ವಾಮಿ ಉತ್ಸವಕ್ಕೆ ಗೌರವಧನ ನೀಡಲು ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ಕೋಲಿ, ಕಬ್ಬಲಿಗ, ಬೆಸ್ತ, ಟೋಕರಿಕೋಲಿ, ವಾಲಿಕಾರ, ತಳವಾರ, ಜಮಾದಾರ, ನಾಯಿಕೋಡಿ, ನಾಟಿಕಾರ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳು ಆಚರಿಸುವ ಜೋಕುಮಾರ ಸ್ವಾಮಿ ಉತ್ಸವಕ್ಕೆ ಸರ್ಕಾರದಿಂದ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಮಾತನಾಡಿ, ಗಣೇಶೋತ್ಸವದ ಬಳಿಕ ಸಾಂಪ್ರದಾಯಿಕವಾಗಿ ಆಚರಿಸಲಾಗುವ ಜೋಕುಮಾರ ಸ್ವಾಮಿ ಉತ್ಸವವು ಬುಡಕಟ್ಟು ಸಮುದಾಯಗಳ ಪ್ರಮುಖ ಸಾಂಸ್ಕೃತಿಕ ಆಚರಣೆಯಾಗಿದೆ. ಮಣ್ಣಿನಿಂದ ತಯಾರಿಸಿದ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಮರದ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ, ಸಮುದಾಯದ ಹೆಣ್ಣುಮಕ್ಕಳು ಮನೆ ಮನೆಗೆ ತೆರಳಿ ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡುವ ಹಾಗೂ ಪ್ರತಿಯಾಗಿ ದವಸ-ಧಾನ್ಯಗಳನ್ನು ಸ್ವೀಕರಿಸುವ ಸಂಪ್ರದಾಯವನ್ನು ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಈ ವಿಶಿಷ್ಟ ಜನಪದ ಸಂಪ್ರದಾಯವನ್ನು ಸಂರಕ್ಷಿಸುವ ಉದ್ದೇಶದಿಂದ ಜೋಕುಮಾರ ಸ್ವಾಮಿ ಉತ್ಸವಕ್ಕೆ ಸರ್ಕಾರದಿಂದ ಕನಿಷ್ಠ ₹51 ಸಾವಿರ ಗೌರವಧನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಬುಡಕಟ್ಟು ಸಮುದಾಯಗಳ ಅನೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿವೆ. ಆದ್ದರಿಂದ ಅರ್ಹ ಫಲಾನುಭವಿಗಳಿಗೆ ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರಗಳನ್ನು ಯಾವುದೇ ಅಡೆತಡೆಯಿಲ್ಲದೆ ನೀಡುವುದರೊಂದಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ. ಟಿ.ಡಿ. ರಾಜ್, ಪ್ರೊ. ಎಲ್.ಬಿ. ಹಿಟ್ಟಿನ್, ಶ್ರೀದೊಡ್ಲ ಪಂಡರಿ, ವಕೀಲ ಮಲ್ಲಿಕಾರ್ಜುನ ಕಲಬೇನ್ನೂರ, ಬಾಬುರಾವ ಜಮಾದಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.