ಕಲಬುರಗಿ | ಒಳಮೀಸಲಾತಿ ಜಾರಿಗೆ ವಿರೋಧಿಸಿ ವಿವಿಧ ಸಮುದಾಯಗಳಿಂದ ಪ್ರತಿಭಟನೆ
ಕಲಬುರಗಿ: ರಾಜ್ಯ ಸರಕಾರದ ಜಾರಿಗೆ ತರುತ್ತಿರುವ ಒಳಮೀಸಲಾತಿ ವರ್ಗೀಕರಣದ ವಿರುದ್ಧ ಬಂಜಾರ, ಭೋವಿ, ಕೊರಚ, ಕೋರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕಸದ ಬಾರಿಗೆ, ಬುಟ್ಟಿ ಮತ್ತಿತರ ಕುಲಕಸುಬಾಗಿ ತಯಾರಿಸುವ ಸಾಮಗ್ರಿಗಳನ್ನು ಹಿಡಿದುಕೊಂಡು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ 63 ಜಾತಿಗಳ ಸಾವಿರಾರು ಜನರು ಮೆರವಣಿಗೆ ನಡೆಸಿ, ಒಳಮೀಸಲಾತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ, ಒತ್ತಾಯಿಸಿದರು.
ಇದೇ ವೇಳೆಯಲ್ಲಿ ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆ ಈಡೇರಿಸಬೇಕೆಂದು ಮನವಿ ಮಾಡಿದರು.
ನ್ಯಾ. ನಾಗಮೋಹನದಾಸ್ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ ವಿಭಾಗಿಸಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಅಸಮರ್ಪಕವಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿವಿಧ ಸಮುದಾಯಗಳ ಮುಖಂಡರುಗಳು ಆರೋಪಿಸಿದರು. ಸಿ ವರ್ಗಕ್ಕೆ ಸೇರಿದ ಭೋವಿ, ಬಂಜಾರ, ಕೊರಮ, ಕೋರಚ ಸೇರಿ 59 ಅಲೆಮಾರಿ ಸಮುದಾಯಗಳಿಗೆ ಕೇವಲ 5% ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಕಾಂಗ್ರೆಸ್ ಸರಕಾರ ಬಂಜಾರ, ಭೋವಿ, ಕೊರಮ, ಕೊರಚ ಸೇರಿ 63 ಜಾತಿಗಳಿಗೆ ಅನ್ಯಾಯ ಮಾಡಿದೆ. ಈ ಹಿಂದೆ ಕೇವಲ ನಾಲ್ಕು ಜಾತಿಗಳಿಗೆ ಬೊಮ್ಮಾಯಿ ಸರಕಾರ 4.5% ಮೀಸಲಾತಿ ನೀಡಿತ್ತು. ಈಗ ಕಾಂಗ್ರೆಸ್ ಸರಕಾರ ರದ್ದು ಪಡಿಸಿ, 63 ಜಾತಿಗಳಿಗೆ ಕೇವಲ 5% ಮೀಸಲಾತಿ ನೀಡಿದೆ. ಇದರ ವಿರುದ್ಧ ಪಕ್ಷಪಾತವಾಗಿ ಒಟ್ಟಾಗಿ ಹೋರಾಟ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಲ್ಯಾಪುರೆ ಮಾತನಾಡಿ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಿದ್ದರಾಮಯ್ಯ ಸರಕಾರ ಅನ್ಯಾಯ ಮಾಡಿದೆ. ಸಮೀಕ್ಷೆ ಸಮರ್ಕಪವಾಗಿ ಮಾಡಿಲ್ಲ. ನಾಗಮೋಹನ ದಾಸ್ ವರದಿ ಸರಿಯಾಗಿ ಆಗಿಲ್ಲ. ಮತ್ತೊಮ್ಮೆ ಸೂಕ್ತ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಾತನಾಡಿ, ರಾಜ್ಯ ಸರ್ಕಾರವು ನ್ಯಾ. ನಾಗಮೋಹನದಾಸ್ ವರದಿಯನ್ನು ತಿದ್ದುಪಡಿ ಮಾಡಿ ಎ, ಬಿ, ಸಿ ವರ್ಗಗಳಾಗಿ 6:6:5 ಅನುಪಾತದಲ್ಲಿ ಮೀಸಲಾತಿ ಹಂಚಿರುವುದು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರಾಮು ಚವ್ಹಾಣ್, ಸಂತೋಷ್ ರಾಥೋಡ್, ರವಿಚಂದ್ರ ಗುತ್ತೇದಾರ್, ಕೃಷ್ಣ ನಾಯಕ, ರಾಜು ಚವ್ಹಾಣ್, ಅಂಜಲಿ, ಲತಾ ರವಿ ರಾಥೋಡ್, ಮಲ್ಲಿಕಾರ್ಜುನ್ ಕುಸ್ತಿ, ಭೀಮಾಶಂಕರ ಬಂಕೂರ, ಶ್ಯಾಮರಾವ್ ಪವಾರ್, ಬಿ.ಬಿ ನಾಯಕ, ಸುರೇಶ್ ಆರ್ ಎಂ ಸಿ, ಸೇರಿದಂತೆ ವಿವಿಧ ಸಮುದಾಯಗಳ ಮಠಾಧೀಶರು, ಕುಲಗುರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.