×
Ad

ಕಲಬುರಗಿ | ಪಾದಯಾತ್ರೆ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆಯ ಹಣ ಪೋಲು : ಬಿಜೆಪಿ ಮುಖಂಡರ ಆರೋಪ

Update: 2025-10-23 22:01 IST

ಕಲಬುರಗಿ: ಆಳಂದ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅ.24ರಿಂದ ಅ.31ರವರೆಗೆ ಗಾಂಧಿ ತತ್ವಗಳ ಪ್ರಸಾರ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿರುತ್ತದೆ ಎಂದು ಆಳಂದ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಗುರುವಾರ ಆಳಂದ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಮುಖಂಡರು, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದರೂ ಆಳಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕರ್ನಾಟಕ ಸರ್ಕಾರದ ಲಾಂಛನ ಹೊಂದಿರುವ, ಕರ್ನಾಟಕ ಸರ್ಕಾರದ ಹೆಸರಿರುವ, ಜಿಲ್ಲಾ ಪಂಚಾಯತ್‌ ಕಲಬುರಗಿ ಹೆಸರಿರುವ ಮತ್ತು ತಾಲೂಕು ಪಂಚಾಯತ್‌ ಕಾರ್ಯಾಲಯ ಆಳಂದ ಹೆಸರಿರುವ ನೋಟಿಸ್ ತೆಗೆದು ಆಯ್ದ ಗ್ರಾ.ಪಂ. ಗಳ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸ್ವಚ್ಛತೆ ಮಾಡಲು, ಕಾರ್ಯಕ್ರಮಕ್ಕೆ ಹಾಜರಾಗಲು ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಲು ಮತ್ತು ಸಂಬಂಧಪಟ್ಟ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಪಾದಯಾತ್ರೆ ಜರುಗುವ ಸಮಯದಲ್ಲಿ ಯಾವುದೇ ಅಡಚಣೆಯಾಗದಂತೆ ಹಾಗೂ ಶಿಷ್ಠಾಚಾರ ಉಲ್ಲಂಘನೆಯಾಗದಂತೆ ಕ್ರಮವಹಿಸಲು ಆದೇಶ ಹೊರಡಿಸಿದ್ದಾರೆ ಎಂದು ಗುರುತರ ಆರೋಪ ಮಾಡಿದ್ದಾರೆ.

ಬಿ.ಆರ್.ಪಾಟೀಲ್ ಶಾಸಕರ ಕಾರ್ಯಾಲಯ ತಾ: ಆಳಂದ ಜಿ: ಕಲಬುರಗಿಯ ಕಾರ್ಯದರ್ಶಿ ಹೆಸರಿನ ಮೇಲೆ ವ್ಯಕ್ತಿಯೊಬ್ಬ ಶಾಸಕರ ಕಚೇರಿಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಿ ಕಚೇರಿಗಳನ್ನು ಹೈಜಾಕ್ ಮಾಡಿರುತ್ತಾರೆ. ಅಲ್ಲದೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್‌ ಆಳಂದರವರಿಗೆ ಬ್ಲ್ಯಾಕ್‍ಮೇಲ್ ಮಾಡಿ ಕೆಎಂಎಫ್ ಅಧ್ಯಕ್ಷರಾದ ಆರ್ ಕೆ ಪಾಟೀಲರ ರಾಜಕೀಯ ಖಾಸಗಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‌ಗಳ ಎಲ್ಲಾ ಸಿಬ್ಬಂದಿಯವರು ಹಾಜರಾಗಿ ಈ ಕಾರ್ಯಕ್ರಮಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಲು ಹಾಗೂ ಸಂಬಂಧಪಟ್ಟ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಪಾದಯಾತ್ರೆ ಕಾರ್ಯಕ್ರಮ ಜರುಗುವ ಸಂದರ್ಭದಲ್ಲಿ ಯಾವುದೇ ಅಡಚಣೆಯಾಗದಂತೆ ಹಾಗೂ ಶಿಷ್ಠಾಚಾರ ಉಲ್ಲಂಘನೆಯಾಗದಂತೆ ಕ್ರಮವಹಿಸಲು ಇಂತಹ ಪತ್ರ ಬರೆಯಲು ಒತ್ತಡ ಹೇರಿರುತ್ತಾರೆ ಎಂದು ಆಪಾದಿಸಿದರು.

ಆದ್ದರಿಂದ ಸರ್ಕಾರದ ಅಧಿಕಾರಿಗಳನ್ನು ಹೈಜಾಕ್ ಮಾಡಿರುವ ಈ ವ್ಯಕ್ತಿಯ ವಿರುದ್ಧ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿ ಸರ್ಕಾರದ ಆಡಳಿತಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸುತ್ತೇವೆ. ಶಾಸಕ ಬಿ.ಆರ್.ಪಾಟೀಲರ ಅಣ್ಣನ ಮಗ ಆರ್.ಕೆ.ಪಾಟೀಲ್‌ ಅವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರಲ್ಲದಿದ್ದರೂ ಸರ್ಕಾರದ ಯೋಜನೆಯ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅಧಿಕಾರಿಗಳು ಇಲ್ಲಿ ಶಿಷ್ಠಾಚಾರ ಪಾಲಿಸುತ್ತಿಲ್ಲ. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆ ಮಾಡುವ ಬೀಜಗಳನ್ನು ಮತ್ತು ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸುತ್ತಿದ್ದಾರೆ ಎಂದು ದಾಖಲೆ ಬಿಡುಗಡೆ ತೋರಿಸಿದರು.

ಅಲ್ಲದೇ ಬಿ.ಆರ್.ಪಾಟೀಲ, ಶಾಸಕರು ಹಾಗೂ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗರವರಿಗೆ ಶಾಸಕರ ಕಾರ್ಯಾಲಯ ಆಳಂದಕ್ಕೆ “ ಕಾರ್ಯಲಯ ಕಾರ್ಯದರ್ಶಿ” ಯನ್ನು ಸರ್ಕಾರದಿಂದ ನೇಮಕ ಮಾಡಲಾಗಿದೆಯೇ? ಒಂದು ವೇಳೆ ನೇಮಕ ಮಾಡಿದ್ದರೇ ಸದರಿ ಸಿಬ್ಬಂದಿಯ ಹೆಸರು ವಿಳಾಸ ಸಹಿತ ನೇಮಕಾತಿ ಆದೇಶದ ಪ್ರತಿ ಬಹಿರಂಗ ಪಡಿಸಲು ಒತ್ತಾಯಿಸಿದರು.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಆಳಂದ ಪಟ್ಟಣದಲ್ಲಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರ ಒಡೆತನದ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‍ಆರ್‍ಜಿ ಫೌಂಡೇಶನ್‌ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಶಾಲಾ ಕಾಲೇಜುಗಳ ಕಟ್ಟಡದ ಮೇಲೆ ಕಳೆದ ಮೂರು ದಿನಗಳಿಂದ ಅನಧಿಕೃತ ಡ್ರೋನ್ ಕ್ಯಾಮೆರಾ ಹಾರಾಟ ನಡೆಸಲಾಗುತ್ತಿದೆ. ರಾಜಕೀಯ ಹಗೆತನವನ್ನು ಸಾಧಿಸಲು ಶಾಸಕ ಬಿ.ಆರ್.ಪಾಟೀಲ ಹಾಗೂ ಗುಮುಲ್ ಅಧ್ಯಕ್ಷ ಆರ್ ಕೆ ಪಾಟೀಲ ಸಂಸ್ಥೆಗಳ ಮೇಲೆ ಅನಧಿಕೃತ ಡ್ರೋನ ಕ್ಯಾಮರಾ ಮುಖಾಂತರ ವಿಡಿಯೋ ಚಿತ್ರಿಕರಣ ಮಾಡಿದ್ದಾರೆ. ಈ ಡ್ರೋನ್ ಕ್ಯಾಮೇರಾ ಸಂಸ್ಥೆಗಳ ಕಟ್ಟಡದಲ್ಲಿ ಹಾರಾಡುವುದನ್ನು ಸಿಬ್ಬಂದಿಯವರು ನೋಡಿ ಅದರ ಹಿಂದೆ ಹೋದಾಗ ಆ ಡ್ರೋನ್ ಕ್ಯಾಮೆರಾ ಶಾಸಕ ಬಿ ಆರ್ ಪಾಟೀಲರವರ ಆಳಂದ ಹೊಸ ಚೆಕ್ ಪೋಸ್ಟ್ ಹತ್ತಿರವಿರುವ ಶಾಸಕರ ಸಂಪರ್ಕ ಕಾರ್ಯಲಯದಲ್ಲಿ ಇಳಿಸಲಾಗಿದೆ.

ಪುಟ್ಟಸ್ವಾಮಿ ವರ್ಸೆಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತ ಸಂವಿಧಾನದ ಕಲಂ 21ರಡಿಯಲ್ಲಿ ಖಾಸಗಿತನವು ಮೂಲಭೂತ ಹಕ್ಕು ಎಂದು ಹೇಳಿದೆ. ಡ್ರೋನ್ ಕಾಯಿದೆ 2021ರ ಪ್ರಕಾರ ವ್ಯಕ್ತಿಗಳ ವೈಯಕ್ತಿಕ ಖಾಸಗಿತನಕ್ಕೆ ಧಕ್ಕೆ ತರುವಂತಿರಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ ದುರುದ್ದೇಶಪೂರಿತ ಕಾರಣದಿಂದ, ವೈಯಕ್ತಿಕವಾಗಿ ಗೂಢಚರ್ಯೆ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ. ಅನುಮತಿಯಿಲ್ಲದೇ ಅನಧಿಕೃತವಾಗಿ ಖಾಸಗಿ ಆಸ್ತಿಗಳ ಮೇಲೆ ಅಥವಾ ವ್ಯಕ್ತಿಗಳ ಮೇಲೆ ಡ್ರೋನ್ ಹಾರಾಟ ನಡೆಸುವುದು ಕ್ರಿಮಿನಲ್ ಅಪರಾಧಕ್ಕೆ ಸಮನಾಗಿದೆ.

ಆದ್ದರಿಂದ ಈ ಕೂಡಲೆ ಆ ಡ್ರೋನ್ ಕ್ಯಾಮೆರಾವನ್ನು ವಶಪಡಿಸಿಕೊಂಡು ಅದರ ಮಾಹಿತಿಯನ್ನು ಪರೀಶೀಲಿಸಬೇಕು. ಈ ಘಟನೆಯಿಂದ ನಮ್ಮ ಖಾಸಗಿ ಹಕ್ಕುಗಳ ಉಲ್ಲಂಘನೆಯಾಗಿದೆ, ಖಾಸಗಿ ಆಸ್ತಿಗಳ ಆವರಣದಲ್ಲಿ ಮಾಜಿ ಶಾಸಕರು ಪ್ರತಿದಿನ ಯೋಗಾಸನ ಸಲುವಾಗಿ ಶಾಲೆಯ ಆವರಣದಲ್ಲಿ ಹೋಗುತ್ತಿರುತ್ತಾರೆ. ಇವು ಎಲ್ಲಾ ಸನ್ನಿವೇಶಗಳು ನೋಡಿದರೆ ಯಾವುದೋ ಒಂದು ದೊಡ್ಡ ಹುನ್ನಾರವನ್ನು ರಚಿಸುತ್ತಿದ್ದಾರೆ. ಅಲ್ಲದೇ ಮಾಜಿ ಶಾಸಕರ ಕೊಲೆ ಮಾಡುವ ಸಂಚು ಹೂಡಿದ್ದಾರೆ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಇದರಿಂದ ಅವರ ಜೀವಕ್ಕೆ ಅಪಾಯವಿದೆ. ಏಕೆಂದರೆ, ಹತ್ತಾರು ವರ್ಷಗಳಿಂದ ನೀಡಿರುವ ಭದ್ರತೆ ಏಕಾಏಕಿ ಹಿಂಪಡೆದುಕೊಂಡಿರುವುದು ಹಾಗೂ ಶೈಕ್ಷಣಿಕ ಸಂಸ್ಥೆಗಳ ವಿಡಿಯೋ ಚಿತ್ರಿಕರಣ ಇವು ಎಲ್ಲಾ ಸನ್ನಿವೇಶಗಳು ನೋಡಿದರೆ ಹಲವು ಸಂಶಯಗಳಿಗೆ ದಾರಿ ಮಾಡಿಕೊಡುತ್ತಾಯಿದೆ. ಅದಕ್ಕೆ ವಿಡಿಯೋ ಚಿತ್ರಿಕರಣ ಮಾಡಿಕೊಂಡ ಶಾಸಕ ಬಿ.ಆರ್.ಪಾಟೀಲ ಹಾಗೂ ಗುಮುಲ್ ಅಧ್ಯಕ್ಷ ಆರ್.ಕೆ.ಪಾಟೀಲ ಮೇಲೆ ಭಾರತೀಯ ನಾಯ್ಯಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರ ವಿರುದ್ದ ಸೂಕ್ತ ಕಾನೂನಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಳಂದ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಆನಂದರಾವ ಪಾಟೀಲ, ಮುಖಂಡರಾದ ಬಾಬಾಸಾಹೇಬ ಪಾಟೀಲ, ಶ್ರೀಮಂತ ಸಾರವಾಡ, ಬಾಬುರಾವ ಸರಡಗಿ, ಪ್ರಕಾಶ ತೋಳೆ, ಪಿಂಟು ಝಳಕಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News