×
Ad

ಕಲಬುರಗಿ | ಆಳಂದ ದರ್ಗಾದ ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ : ಶಾಂತಿ-ಸೌಹಾರ್ದತೆ ಕಾಪಾಡಲು ಮನವಿ

Update: 2025-02-22 21:02 IST

ಕಲಬುರಗಿ: ಮಹಾಶಿವರಾತ್ರಿ ನಿಮಿತ್ಯ ಫೆ.26 ರಂದು ಆಳಂದ ಪಟ್ಟಣದ ಲಾಡ್ಲೆ ಮಶಾಖ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದು ಸಂಘಟನೆಗಳಿಂದ ಮಹಾಪೂಜೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಮತ್ತು ತಾಲೂಕಿನಾದ್ಯಂತ ಜನರು ಶಾಂತಿ-ಸೌಹಾರ್ದತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮನವಿ ಮಾಡಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಿಂದೂ, ಮುಸ್ಲಿಂ ಧಾರ್ಮಿಕ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಿದ ಅವರು, ನ್ಯಾಯಾಲಯ ಆದೇಶವನ್ನು ಎಲ್ಲರು ಪಾಲಿಸುವ ಮೂಲಕ ಶಾಂತಿ ಸೌಹಾರ್ದಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದರು.

ಕಲಬುರಗಿ ಜಿಲ್ಲೆ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಹೀಗಾಗಿ ಪರಸ್ಪರ ಧರ್ಮದ ಜನರು ಪ್ರೀತಿ ಅನ್ಯೊನ್ಯತೆಯಿಂದ ಹಬ್ಬ ಹರಿ-ದಿನಗಳನ್ನು ಆಚರಿಸಬೇಕು ಎಂದು ಧರ್ಮದ ಮುಖಂಡರಿಗೆ ಡಿಸಿ ತಿಳಿಸಿದರು.

ಎಸ್.ಪಿ. ಅಡ್ಡೂರು ಶ್ರೀನಿವಾಸಲು ಮಾತನಾಡಿ, ಕೆಲ ಕಿಡಿಗೇಡಿಗಳು ಸಾಮಾಜಿಕ ಸಾಮರಸ್ಯ ಹಾಳು ಮಾಡಲು ಯತ್ನಿಸುತ್ತವೆ. ಇಂತದ್ದಕ್ಕೆಲ್ಲ ಸಾರ್ವಜನಿಕರು, ಧಾರ್ಮಿಕ ಮುಖಂಡರು ಅವಕಾಶ ಮಾಡಿಕೊಡಬಾರದು. ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಹಡಿದಾಡುವ ಸತ್ಯಕ್ಕೆ ದೂರವಾದ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದ ಅವರು, ಸಮಾಜದಲ್ಲಿನ ಶಾಂತಿಗೆ ಧಕ್ಕೆ ತರುವ ಕಿಡಿಗೇಡಿಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ ಎಂದರು.

ಆಳಂದ ತಾಲೂಕಿನಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಪೊಲೀಸ್ ಠಾಣೆ ಹಂತದಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಗಿದ್ದು, ಮಹಾಶಿವರಾತ್ರಿ ದಿನದಂದು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಸಹ ಕಲ್ಪಿಸಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಕಲಬುರಗಿ ಸಹಾಯಕ ಅಯುಕ್ತೆ ಸಾಹಿತ್ಯ ಸೇರಿದಂತೆ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News