ಕಲಬುರಗಿ | ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಮೇ 31ರವರೆಗೆ ಕಾಲಾವಧಿ ವಿಸ್ತರಣೆ : ಬಿ.ಫೌಝಿಯಾ ತರನ್ನುಮ್
ಬಿ.ಫೌಝಿಯಾ ತರನ್ನುಮ್
ಕಲಬುರಗಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನ ತೊಗರಿ ಖರೀದಿಗೆ ಈಗಾಗಲೇ ನೋಂದಣಿ ಮಾಡಿಕೊಂಡು ಮಾರಾಟ ಮಾಡದೆ ಇರುವ 15,067 ರೈತರಿಂದ ಭೌತಿಕ ತೊಗರಿ ಖರೀದಿ ಮಾಡಲು ಕಾಲಾವಧಿಯನ್ನು ಮೇ 1 ರಿಂದ 31ರ ವರೆಗೆ ವಿಸ್ತರಿಸಿದ್ದು, ರೈತರು ಲಾಭ ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ನಿಗಧಿಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ 450 ರೂ. ಸೇರಿ ಒಟ್ಟು ಪ್ರತಿ ಕ್ವಿಂಟಾಲ್ ಗೆ 8,000 ರೂ. ದರದಂತೆ ಪ್ರತಿ ಎಕರೆಗೆ 4 ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಮೂಲಕ ಜಿಲ್ಲೆಯಲ್ಲಿ ಒಟ್ಟು 189 ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿ ಮಾಡಲಾಗುತ್ತಿದೆ ಎಂದು ಡಿ.ಸಿ. ತಿಳಿಸಿದ್ದಾರೆ.
ಇದುವರೆಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಸಂಸ್ಥೆಯವರು 33,518 ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯವರು 14,730 ರೈತರು ನೊಂದಣಿ ಕೈಗೊಂಡಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟಾರೆ 48,248 ರೈತರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 33,181 ರೈತರಿಂದ 4,98,303 ಕ್ವಿಂಟಾಲ್ ತೊಗರಿಯನ್ನು ಖರೀದಿಸಲಾಗಿರುತ್ತದೆ. ನೋಂದಣಿ ಮಾಡಿಕೊಂಡು ಮಾರಾಟ ಮಾಡದೆ ಬಾಕಿ ಉಳಿದುಕೊಂಡ 15,067 ರೈತರಿಂದ ಭೌತಿಕ ತೊಗರಿ ಖರೀದಿಗೆ ಕಾಲಾವಧಿಯನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಡಿ.ಸಿ. ತಿಳಿಸಿದ್ದಾರೆ.