ಕಲಬುರಗಿ | ಜಾತಿ ಸಮೀಕ್ಷೆಯಲ್ಲಿ ರಡ್ಡಿ ಲಿಂಗಾಯತ ಎಂದು ನೋಂದಾಯಿಸಿ: ಡಾ.ಶರಣಬಸವಪ್ಪ ಕಾಮರಡ್ಡಿ
ಕಲಬುರಗಿ : ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ‘ಕೋಡ್ ಎ-1192 – ರಡ್ಡಿ ಲಿಂಗಾಯತ’ ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಕಲಬುರಗಿ ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ಶರಣಬಸವಪ್ಪ ಕಾಮರೆಡ್ಡಿ ಹೇಳಿದರು.
ನಗರದ ರಡ್ಡಿ ಸಮಾಜದ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 22ರಿಂದ ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಇತರೆ ಸುಮಾರು 60 ಅಂಶಗಳ ಮಾಹಿತಿಯನ್ನು ಒಳಗೊಂಡ ಜನಗಣತಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
“ಸೆಪ್ಟೆಂಬರ್ 3ರಂದು ಹುಬ್ಬಳ್ಳಿಯಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯಮಟ್ಟದ ಕಾರ್ಯಕಾರಿ ಸಭೆಯಲ್ಲಿ, ರಾಜ್ಯ ಸರ್ಕಾರ ಪ್ರಕಟಿಸಿರುವಂತೆ ಜಾತಿ ಕಾಲಂನಲ್ಲಿ ‘ಎ-1192 ರಡ್ಡಿ ಲಿಂಗಾಯತ’ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಆದ್ದರಿಂದ ಕಲಬುರಗಿ ಜಿಲ್ಲೆಯ ಸಮಾಜದ ಪ್ರತಿಯೊಂದು ಕುಟುಂಬವೂ ತಮ್ಮ ವೈಯಕ್ತಿಕ ವಿವರಗಳನ್ನು ನಿಖರವಾಗಿ ದಾಖಲಿಸಬೇಕು,” ಎಂದು ಹೇಳಿದರು.
ಧರ್ಮ ಮತ್ತು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಅಥವಾ ಲಿಂಗಾಯತ ರೆಡ್ಡಿ – ಎ-1192 ಎಂದು ಮಾತ್ರ ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ರಡ್ಡಿ ಪರಸರಡ್ಡಿ, ಜಾನು ಗೌಡ, ಡಾ. ಸಂಜೀವರೆಡ್ಡಿ, ಸಿದ್ದರಡ್ಡಿ, ಸಂಜುರಡ್ಡಿ, ಮಹೇಶ ರಡ್ಡಿ, ಶಾಂತರಡ್ಡಿ, ಪಂಪನಗೌಡ, ಅಂಬರೀಶ ಕೊಡದ, ಪ್ರೊ. ವಣಿಕ್ಯಾಳ, ಶಂಕರ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.