ಕಲಬುರಗಿ | ಜಾತಿ ಕಾಲಂನಲ್ಲಿ ನದಾಫ್-ಪಿಂಜಾರ ಎಂದು ನೋಂದಾಯಿಸಿ: ಸದ್ದಾಮ್ ವಜೀರಗಾಂವ್
ಕಲಬುರಗಿ: ರಾಜ್ಯ ಸರಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ–2025 ಹಾಗೂ ಜಾತಿ ಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿ ಕಾಲಂನಲ್ಲಿ ನದಾಫ್ ಅಥವಾ ಪಿಂಜಾರ ಎಂದು ನೋಂದಾಯಿಸಬೇಕು ಎಂದು ನದಾಫ್/ಪಿಂಜಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸದ್ದಾಮ್ ವಜೀರಗಾಂವ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೆ.22ರಿಂದ ಅ.7ರವರೆಗೆ ನಡೆಯಲಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ನದಾಫ್–ಪಿಂಜಾರ ಸಮುದಾಯದವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಇಸ್ಲಾಂ ಎಂದು ನಮೂದಿಸಿದ ನಂತರ ಜಾತಿ ಕಾಲಂನಲ್ಲಿ ಏನು ಬರೆಯಬೇಕು ಎನ್ನುವ ಗೊಂದಲ ಎದುರಾಗುತ್ತಿದೆ. ಉನ್ನತ ಮಟ್ಟದ ಸಭೆಯ ತೀರ್ಮಾನದಂತೆ, ರಾಜ್ಯ ಹಾಗೂ ಕೇಂದ್ರದ ಮಟ್ಟದಲ್ಲಿ ಪ್ರತ್ಯೇಕ ಮೀಸಲಾತಿ ಪಡೆಯುತ್ತಿರುವ 36 ಜಾತಿಗಳಲ್ಲಿ ಒಂದಾದ ಪಿಂಜಾರ ಮತ್ತು ನದಾಫ್ ಸಮುದಾಯವನ್ನು ಜಾತಿ ಕಾಲಂನಲ್ಲಿ ನಮೂದಿಸಬೇಕು ಎಂದು ನಿರ್ಧರಿಸಲಾಗಿದೆ. ಆದ್ದರಿಂದ ಸಮುದಾಯದವರು 8ನೇ ಕಾಲಂನಲ್ಲಿ ಧರ್ಮ–ಇಸ್ಲಾಂ, 9ನೇ ಕಾಲಂನಲ್ಲಿ ಜಾತಿ–ನದಾಫ್ ಅಥವಾ ಪಿಂಜಾರ, ಉಪಜಾತಿ ಕಾಲಂ ಖಾಲಿ ಬಿಡಬೇಕು. ಜೊತೆಗೆ, ಈಗಲೂ ಹತ್ತಿ ಶುದ್ಧಗೊಳಿಸುವ ಕುಲಕಸುಬನ್ನು ಮುಂದುವರೆಸುತ್ತಿರುವವರು ಅದನ್ನೇ ದಾಖಲಿಸಬೇಕು, ಎಂದು ಹೇಳಿದರು.
ಪಿಂಜಾರ ಸಮುದಾಯ ಸೇರಿದಂತೆ 36 ಜಾತಿಗಳು ಸರ್ಕಾರದ ಪ್ರಕಾರ ಇಸ್ಲಾಂ ಧರ್ಮದ ಅಡಿಯಲ್ಲಿ ಬರುವುದರಿಂದ ಧಾರ್ಮಿಕ ವಿಚಾರದಲ್ಲಿ ಹೊರಗೆ ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮೌಲಾಲಿ ನದಾಫ್, ಮೆಹಮೂದ್ ನದಾಫ್, ವಾಹೀದ್ ನದಾಫ್ ಹಾಗೂ ಇತರರು ಹಾಜರಿದ್ದರು.