×
Ad

ಕಲಬುರಗಿ | ಆ.22 ರಿಂದ ರೆಹಮಾನ್ ಪಟೇಲ್ ಅವರ ʼಯುದ್ಧ ಬೇಡʼ ಶೀರ್ಷಿಕೆಯ ವರ್ಣಚಿತ್ರ ಪ್ರದರ್ಶನ

Update: 2025-08-21 23:08 IST

ಕಲಬುರಗಿ: ಇಲ್ಲಿನ ಪ್ರಸಿದ್ಧ ಕಲಾವಿದ ರೆಹಮಾನ್ ಪಟೇಲ್ ಅವರ ಶಾಂತಿಯ ಕುರಿತ “ಯುದ್ಧ ಬೇಡ”ಎಂಬ ಆಲೋಚನಾತ್ಮಕ ವರ್ಣಚಿತ್ರವು, ಲಾವಣ್ಯ ಇಂಟರ್ನ್ಯಾಷನಲ್ ಆರ್ಟ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಐದು ದಿನಗಳ ರಾಷ್ಟ್ರೀಯ ಕಲೆ ಪ್ರದರ್ಶನದಲ್ಲಿ ಆ. 22ರಿಂದ 26ರವರೆಗೆ, ಬೆಂಗಳೂರು ಬಸವನಗುಡಿಯಲ್ಲಿ ಭಾರತೀಯ ವಿಶ್ವ ಸಂಸ್ಕೃತಿ ಸಂಸ್ಥೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕಲಾಕೃತಿಯಲ್ಲಿ ರೆಹಮಾನ್ ಪಟೇಲ್ ಅವರು ವಿಶ್ವ ಶಾಂತಿಯ ಪ್ರತೀಕವಾದ ಆಲಿವ್ ಕೊಂಬು ಹಿಡಿದ ಪಾರಿವಾಳವನ್ನು ಆಕರ್ಷಕವಾಗಿ ಚಿತ್ರಿಸಿದ್ದಾರೆ. ಹಲವು ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿ ಗೌರವಿಸಲ್ಪಟ್ಟಿರುವ ಈ ಪಾರಿವಾಳವು ಪ್ರೇಮ, ಶುದ್ಧತೆ, ಸಮರ್ಪಣೆ ಮತ್ತು ಸಾಮರಸ್ಯದ ಪ್ರತೀಕವಾಗಿದೆ.

ಚಿತ್ರ ಕಲಾಕೃತಿಯ ಕುರಿತು ರೆಹಮಾನ್ ಪಟೇಲ್ ಅವರ ಅಭಿಪ್ರಾಯದಲ್ಲಿ ಕಲೆ ಸಂಘರ್ಷಗಳನ್ನು ನಿವಾರಿಸಿ ಶಾಂತಿಯನ್ನು ಹರಡಲು ಶಕ್ತಿಯುತವಾಗಿದೆ. “ಕಲೆ ಒಂದು ವಿಶ್ವಭಾಷೆ. ಅದು ಸಹೋದರತ್ವ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ. ಅಶಾಂತಿ, ಅಲಮಲೆ ತುಂಬಿರುವ ಈ ದಿನಗಳಲ್ಲಿ ಕಲೆ ಪ್ರೀತಿ ಮತ್ತು ಶಾಂತಿಯನ್ನು ಹಂಚುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಈ ಚಿತ್ರದಲ್ಲಿ ಕೆಂಪು ಹಾಗೂ ನೀಲಿ-ಹಸಿರು ಬಣ್ಣಗಳಿಂದ ರಕ್ತಸಿಕ್ತತೆ ಮತ್ತು ಹೊಗೆಯನ್ನು ಚಿತ್ರಿಸಿದ್ದು, ಆ ಹಿನ್ನೆಲೆಯ ನಡುವೆ ಆಲಿವ್ ಕೊಂಬನ್ನು ಹಿಡಿದು ಹಾರುತ್ತಿರುವ ಪಾರಿವಾಳವು ಯುದ್ಧವನ್ನು ನಿಲ್ಲಿಸುವ ಸಂದೇಶವನ್ನು ನೀಡುತ್ತದೆ. ಪ್ರತಿಯೊಂದು ಬಣ್ಣ ಹಾಗೂ ಕುಂಚದ ಹೊಡೆತವು ಯುದ್ಧ ಮಾನವಕುಲಕ್ಕೂ, ಭೂಮಿಗೂ ಹಾನಿಕಾರಕವೆಂದು ಸಾರುತ್ತದೆ.

ಪಟೇಲ್ ಅವರು ಇನ್ನಷ್ಟು ವಿವರಿಸಿ, ಭೂಮಿ ಮಾತ್ರವೇ ಮಾನವ ಜೀವನ ಸಾಗಲು ಯೋಗ್ಯವಾದ ಏಕೈಕ ಗ್ರಹ ಎಂದು, ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ. ಅವರ ಈ ಕೃತಿ ಶಾಂತಿಯ ಅಗತ್ಯವನ್ನು ಭವಿಷ್ಯದ ತಲೆಮಾರಿಗೆ ತಲುಪಿಸುವ ಶಕ್ತಿಯುತ ನೆನಪಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News