ಕಲಬುರಗಿ | ಕೋಮುವಾದ ಸೃಷ್ಠಿಸುವ ವ್ಯಕ್ತಿಗಳನ್ನು ಜಿಲ್ಲೆಯಿಂದ ಹೊರಹಾಕಿ: ಡಾ.ನಂದಕುಮಾರ್
ಕಲಬುರಗಿ: ವಿದ್ಯಾರ್ಜನೆ ಸ್ಥಳವಾದ ಶೈಕ್ಷಣಿಕ ಕೇಂದ್ರದಲ್ಲಿ ತಮ್ಮ ಕೊಳಕು ಬುದ್ಧಿಯ ಮೂಲಕ ವಿಶ್ವವಿದ್ಯಾಲಯವನ್ನು ಹಾಳು ಮಾಡಲು ಹೊರಟಿರುವ ಶ್ರೀರಾಮ ಸೇನೆಯ ಅಧ್ಯಕ್ಷ ಆoದೋಲಾ ಸ್ವಾಮಿ ಮತ್ತು ಅವರಂತೆ ಅಸಹಿಷ್ಣುತೆ ಹುಟ್ಟು ಹಾಕುತ್ತಿರುವ ಕೋಮುವಾದಿ ವ್ಯಕ್ತಿಗಳನ್ನು ಜಿಲ್ಲೆಯಿಂದ ಹೊರಹಾಕಬೇಕೆಂದು ಅಂಬೇಡ್ಕರ್ ಅಸೋಸಿಯೇಷನ್ ಸದಸ್ಯ ಹಾಗೂ ಸಿಯುಕೆ ಸಂಶೋಧನಾ ವಿದ್ಯಾರ್ಥಿ ಆಗಿದ್ದ ಡಾ.ನಂದಕುಮಾರ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಕೋಮುವಾದಿ ಆಂದೋಲಾ ಸ್ವಾಮಿ ಅವರು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದಾಗ, ಬಿಜೆಪಿ ಮುಖಂಡ ದಲಿತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ, ಈ ಭಾಗದ ದಲಿತ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳು ದಾಖಲಾದಾಗ ಬಾಯಿ ಬಿಡಲಿಲ್ಲ ಎಂದು ಹೇಳಿದರು.
ಇದೀಗ ಅನಾವಶ್ಯಕ ಸಂಗತಿಗಳನ್ನು ಮುನ್ನೆಲೆಗೆ ತಂದು ದಲಿತ ಸಮುದಾಯದ ವಿದ್ಯಾರ್ಥಿನಿಯ ಸಾವು ಮತ್ತು ಅಸ್ಪೃಶ್ಯ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯವನ್ನು ಮರೆಮಾಚಿಸಲು ಯತ್ನಿಸುವವರನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇವರನ್ನು ಜಿಲ್ಲೆಯಿಂದ ಹೊರಹಾಕದಿದ್ದರೆ ಮುಂದಾಗುವ ಅನಾಹುತಗಳಿಗೆ ಅಮಾಯಕರು ಬೆಲೆ ತೆರೆಬೇಕಾದಿತು ಎಂದು ಪತ್ರಿಕಾ ಪ್ರಕಟಣೆ ಮೂಲಕ ಅವರು ತಿಳಿಸಿದ್ದಾರೆ.