ಕಲಬುರಗಿ | ನ.2ರಂದು ಚಿತ್ತಾಪುರದಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡಲು ಮನವಿ
ಕಲಬುರಗಿ: ನೋಂದಣಿಯಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸಂಘಟನೆಯನ್ನು ನಿಷೇಧಿಸಬೇಕೆಂದು ಹಾಗೂ ನ.2ರಂದು ಚಿತ್ತಾಪುರದಲ್ಲಿ ನಡೆಯಲಿರುವ ಆರೆಸ್ಸೆಸ್ ಪಥಸಂಚಲನದ ದಿನವೇ ತಮಗೂ ರ‍್ಯಾಲಿ ನಡೆಸಲು ಅನುಮತಿ ನೀಡಬೇಕೆಂದು ಜೈ ಭೀಮ್ ಸೇನೆಯ ಜಿಲ್ಲಾ ಅಧ್ಯಕ್ಷ ರಾಹುಲ್ ಎಸ್.ಉಪಾರ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಅವರು, ಆರೆಸ್ಸೆಸ್ ಸಂಘಟನೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ದಲಿತ, ಮುಸ್ಲಿಂ ಹಾಗೂ ಶೋಷಿತರ ವಿರೋಧಿಯಾಗಿದ್ದು, ಪಥಸಂಚಲನದ ಹೆಸರಲ್ಲಿ ಲಾಠಿ ಹಿಡಿದು ಕೋಮು ಗಲಭೆ ಹಾಗೂ ದಂಗೆ ಪ್ರಚೋದಿಸುವ ಪ್ರವೃತ್ತಿಯಾಗಿದೆ ಎಂದು ಆರೋಪಿಸಿದರು.
ಸೇನೆಯ ಉತ್ಸಾಹಿ ಹಿರಿಯರು, ಮಹಿಳೆಯರು, ವಿದ್ಯಾರ್ಥಿ ಒಕ್ಕೂಟ, ರೈತರು, ಪ್ರಗತಿಪರ ಚಿಂತಕರು ಮತ್ತು ಭಾರತ ಸಂವಿಧಾನ ಗೌರವಿಸುವ ದೇಶಭಕ್ತರು ಮತ್ತು ಇತರೆ ಎಲ್ಲಾ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುದ್ಧ-ಬಸವ-ಅಂಬೇಡ್ಕರ ಅವರ ವಿಚಾರಧಾರೆಯ ಪ್ರಗತಿ, ಚಿಂತನೆಯ ನಾಗರೀಕರೆಲ್ಲರೂ ಸೇರಿಕೊಂಡು ಚಿತ್ತಾಪುರ ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಪಥಸಂಚಲನೆ ನಡೆಸಿ ಭಾರತೀಯ ಪರಂಪರೆ, ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು, ಸಾಮಾಜಿಕವಾಗಿ ಸಮಸಮಾಜ ನಿರ್ಮಾಣದ ಸಂವಿಧಾನದ ಪ್ರತಿಗಳು, ರಾಷ್ಟ್ರೀಯ ತಿರಂಗಾ ಧ್ವಜ, ನೀಲಿ ಧ್ವಜ, ಪಂಚಶೀಲ ಧ್ವಜ, ನೀಲಿ ಶಾಲು, ಧ್ವಜವನ್ನು ಹೆಗಲ ಮೇಲೆ ಹೊತ್ತು ಕೈಯಲ್ಲಿ ಹಿಡಿದುಕೊಂಡು ಪಥಸಂಚಲನ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೇನೆ ರಾಜ್ಯ ಸಮಿತಿಯ ಸಂಚಾಲಕರಾದ ಗುಂಡಪ್ಪ ಲಂಡನಕರ್, ಸಿದ್ದಾರ್ಥ ದಿಕಸಂಗಿಕರ್, ಅಮಿತಕುಮಾರ್ ಎಂ.ಮಾಲೆ, ಅರುಣಕುಮಾರ್ ವಿ., ರೇವಣ್ಣ ಬಾವಿಮನಿ, ದತ್ತು ಬಿ.ಬಿಕ್ಕನ, ನಿರಗುಣ ಬಳಿಚಕ್ರ, ನಾಗರಾಜ ಪಟ್ಟಣರ ದರ್ಶನ ಮುಡ್ಡಿ, ಎಂ.ಡಿ.ಸದ್ದಾಮ್ ಸೇರಿದಂತೆ ಹಲವರು ಇದ್ದರು.