×
Ad

ಕಲಬುರಗಿ | ಪ್ರತಿಯೊಬ್ಬರು ಕೈ ಜೋಡಿಸಿದರೆ ಮಾತ್ರ ಫಲಿತಾಂಶ ಸುಧಾರಣೆ ಸಾಧ್ಯ: ಡಾ.ಶರಣಪ್ಪ ಎಸ್.ಡಿ

Update: 2025-09-08 00:02 IST

ಕಲಬುರಗಿ: ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಹೇಳಿದರು.

ನಗರದ ಸೇಡಂ ರಸ್ತೆಯಲ್ಲಿರುವ ಎಂಆರ್‌ಎಂಸಿ ಸ್ಯಾಕ್‌ ಸಭಾಂಗಣದಲ್ಲಿ ರವಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಗಳೂರು ಹಾಗೂ ಕಲಬುರಗಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲೇ ಇರುತ್ತವೆ. ಇದನ್ನು ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪಾಲಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸೇರಿ ಕೈಜೋಡಿಸಿದಾಗ ಫಲಿತಾಂಶದಲ್ಲಿ ಕ್ರಮೇಣ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಪಡೆದ ಅಂಕಗಳು ಹಾಗೂ ಪದವಿ ಪುರಸ್ಕಾರಗಳು ಅವರ ಭವಿಷ್ಯವನ್ನು ರೂಪಿಸಲಾರವು. ಶಿಕ್ಷಣವೆನ್ನುವುದು ಕೇವಲ ಅಂಕಗಳಲ್ಲ. ಅದು ವ್ಯಕ್ತಿಯೊಬ್ಬರ ಸಮಗ್ರ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳಲ್ಲಿ ಅಥವಾ ವ್ಯಕ್ತಿಯೊಬ್ಬರಲ್ಲಿ ಧೈರ್ಯ, ಆತ್ಮವಿಶ್ವಾಸ, ವ್ಯಕ್ತಿತ್ವ ನಿರ್ಮಿಸಿ ಸಮಾಜಕ್ಕಾಗಿ ಅವರನ್ನು ಸಜ್ಜುಗೊಳಿಸುವುದೇ ಶಿಕ್ಷಣವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಕೇಂದ್ರೀಯ ವಿ.ವಿ ಸಹಪ್ರಾಧ್ಯಾಪಕ ಗಣಪತಿ ಸಿನ್ನೂರ ಉಪನ್ಯಾಸ ನೀಡಿದರು.

ಎಬಿಎಆರ್‌ಎಸ್‌ಎಂ ಸಿಯುಕೆ ಘಟಕದ ಅಧ್ಯಕ್ಷ ಪ್ರೊ. ಚನ್ನವೀರ ಆರ್‌.ಎಂ., ಕರ್ನಾಟಕ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯದರ್ಶಿ ಮಹೇಶ ಬಸರಕೋಡ, ಕಲಬುರಗಿ ವಿಭಾಗೀಯ ಪ್ರಮುಖ ಚಂದ್ರಶೇಖರ ಪಾಟೀಲ, ಸಂಘದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News