ಕಲಬುರಗಿ | ಟಿಕೇಟ್ ರಹಿತ ಪ್ರಯಾಣಿಕರಿಂದ 5,29,403 ರೂ. ದಂಡ ವಸೂಲಿ
Update: 2025-06-30 20:15 IST
ಕಲಬುರಗಿ: ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ 2025ರ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ಟಿಕೇಟ್ ರಹಿತ ಪ್ರಯಾಣಿಕರಿಂದ ಒಟ್ಟು 5,29,403 ರೂ. ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದ್ದು, ಸಾರ್ವಜನಿಕ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೇಟ್/ಪಾಸ್ ಪಡೆದು ಪ್ರಯಾಣ ಮಾಡಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಿಗಮದ ವ್ಯಾಪ್ತ್ತಿಯಲ್ಲಿ ಸಂಚರಿಸುವ ಒಟ್ಟು 36,704 ವಾಹನಗಳನ್ನು ತನಿಖೆಗೊಳಪಡಿಸಿ, ಒಟ್ಟು 2,315 ಪ್ರಕರಣಗಳನ್ನು ಪತ್ತೆ ಹಚ್ಚಿ, ಇದರಲ್ಲಿ ಒಟ್ಟು 2,580 ಟಿಕೇಟ್ ರಹಿತ ಪ್ರಯಾಣಿಕರಿಂದ ಒಟ್ಟು 5,29,403 ರೂ ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ ಒಟ್ಟು 1,39,363 ರೂ. ಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.