ಕಲಬುರಗಿ | ಎಸ್.ಬಿ.ಹೊಸಮನಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಎಸ್.ಬಿ.ಹೊಸಮನಿ
ಕಲಬುರಗಿ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಎಸ್.ಬಿ.ಹೊಸಮನಿ ಅವರು "ಶಿಕ್ಷಣ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಕೌಜಲಗಿಯಲ್ಲಿ 1945ರಲ್ಲಿ ಜನಿಸಿದ ಎಸ್.ಬಿ.ಹೊಸಮನಿ ಅವರ ಪೂರ್ಣ ಹೆಸರು ಸಣ್ಣಬಾಳಪ್ಪ ಬಸಪ್ಪ ಹೊಸಮನಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕೇಂದ್ರ ಸರ್ಕಾರದ ಟಿಲಿಕಾಂ ಇಲಾಖೆಯಲ್ಲಿ ಹೀಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.
ಎಸ್.ಬಿ.ಹೊಸಮನಿಗೆ ದೊರೆತ ಪ್ರಶಸ್ತಿಗಳು :
2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕಲಬುರಗಿಯಿಂದ ಒಬ್ಬರೇ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ವಿಜಯಪುರದಲ್ಲಿ ಹುಟ್ಟಿದ ಹೊಸಮನಿ ಅವರು ಕಲಬುರಗಿ ಜಿಲ್ಲೆಯಲ್ಲಿ ಪಿಯುಸಿ ಓದಿದ್ದು, ಬಳಿಕ ಗುಲ್ಬರ್ಗ ವಿವಿಯಲ್ಲಿ ಆಗ ಇದ್ದ ಪಿ.ಜಿ ಸೆಂಟರ್ ನಲ್ಲಿ ವ್ಯಾಸಂಗ ಮಾಡಿದ್ದಾರೆ. ಜಿಲ್ಲೆಯ ನಂಟು ಹೊಂದಿದ್ದ ಅವರು ಕೇಂದ್ರ ಸರ್ಕಾರ ಟೆಲಿಕಾಂ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ಕಲಬುರಗಿಯಲ್ಲೇ ಕೆಲಸ ನಿರ್ವಹಿಸಿದ್ದಾರೆ. ಬಳಿಕ ರಾಜ್ಯದ ವಿವಿಧೆಡೆ ಶಿಕ್ಷಕ, ಉಪನ್ಯಾಸಕ, ಸರ್ಕಾರ ಅಡಿಯಲ್ಲಿರುವ ವಿವಿಧ ಸಂಸ್ಥೆಗಳಲ್ಲಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
81 ರ ಹರೆಯದ ಎಸ್.ಬಿ.ಹೊಸಮನಿ ಅವರು, ಒಟ್ಟು 16 ಪುಸ್ತಕಗಳನ್ನು ರಚಿಸಿದ್ದಾರೆ. "ಆಡಳಿತದಲ್ಲಿ ಕನ್ನಡ ಬಳಸಿ" ಕೃತಿ ಸೇರಿದಂತೆ ಇತರ ಕೃತಿಗಳಿಗೂ ಪ್ರಶಸ್ತಿಗಳು ಒಲಿದುಬಂದಿವೆ. "ಆಡಳಿತದಲ್ಲಿ ಕನ್ನಡ" ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ನೂರಾರು ಸಂಖ್ಯೆಯ ಸರ್ಕಾರಿ ನೌಕರರಿಗೆ 101ಕ್ಕೂ ಹೆಚ್ಚು ತರಬೇತಿಗಳನ್ನು ಮಾಡುವ ಮೂಲಕ ತಮ್ಮಲ್ಲಿನ ಕನ್ನಡತನವನ್ನು ಮೆರೆದಿದ್ದಾರೆ.
ಐವರು ಮಕ್ಕಳನ್ನು ಹೊಂದಿರುವ ಇವರ ಸುಪುತ್ರರೊಬ್ಬರು ಕಲಬುರಗಿಯ ಲೋಕಾಯುಕ್ತ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಗೆ ಕಳೆದ ವರ್ಷದಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಬಂದಿತ್ತು. ಇದೀಗ ಈ ವರ್ಷ ಮೂಲತಃ ಕಲಬುರಗಿಯಲ್ಲಿ ಜನಿಸಿದ ಸಾಧಕನಿಗೆ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಗಮನಾರ್ಹ.
ಶಿಫಾರಸು ಮಾಡದೆ ಪ್ರಶಸ್ತಿ ಬಂದದ್ದು ಅಚ್ಚರಿ:
ರಾಜ್ಯ ಸರಕಾರಕ್ಕೆ ಶಿಫಾರಸು ಮಾಡದೆ ನನಗೆ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ, ಶಿಫಾರಸು ಇಲ್ಲದಂತೆ ಪ್ರಶಸ್ತಿ ದಕ್ಕಿರುವುದು ಅಚ್ಚರಿ. ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ.
-ಎಸ್. ಬಿ.ಹೊಸಮನಿ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)