ಕಲಬುರಗಿ | ಎಸ್.ಬಿ.ಜಂಗಮಶೆಟ್ಟಿ ಅವರು ಸಾವಿನ ನಂತರವೂ ಅಮರವಾಗಿ ಉಳಿದಿದ್ದಾರೆ: ಸೋಮಣ್ಣ ಬೇವಿನಮರದ
ಕಲಬುರಗಿ: ಬಸವಣ್ಣನವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಎಸ್.ಬಿ.ಜಂಗಮಶೆಟ್ಟಿ ಅವರು ತಮ್ಮ ಸಾವಿನ ನಂತರವೂ ಅಮರವಾಗಿ ಉಳಿದಿದ್ದಾರೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದ್ದಾರೆ.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ರಂಗಸಂಗಮ ಕಲಾವೇದಿಕೆ ಆಯೋಜಿಸಿದ್ದ ‘ಎಸ್.ಬಿ.ಜಂಗಮಶೆಟ್ಟಿ ಹಾಗೂ ಸುಭದ್ರಾದೇವಿ ಜಂಗಮಶೆಟ್ಟಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಎಸ್.ಬಿ.ಜಂಗಮಶೆಟ್ಟಿ ಅವರು ಸಜ್ಜನರ ಸಂಗ ಮಾಡಿರುವ ಫಲವೇ ಇಂದು ನಮ್ಮೆಲ್ಲರ ಮಧ್ಯೆ ಜೀವಂತ ಎನಿಸುತ್ತಿದ್ದಾರೆ. ಅಂತಹ ಮೇರು ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಕರಾವಳಿ ಪ್ರದೇಶಗಳಲ್ಲಿ ಯಕ್ಷಗಾನ ಕಲೆ ಪೋಷಿಸಿ, ವಿಶ್ವಮಟ್ಟದಲ್ಲಿ ಗುರುತಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಆದರೆ, ಈ ಭಾಗದ ಬಯಲಾಟ, ಸಣ್ಣಾಟ, ದಪ್ಪಿನಾಟ ನಶಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಾವಿದ ದಯಾನಂದ ಬೀಳಗಿ ಅವರಿಗೆ ‘ಶ್ರೀ ಎಸ್.ಬಿ.ಜಂಗಮಶೆಟ್ಟಿ’ ಹಾಗೂ ಕಲಾವಿದೆ ಗೀತಾ ಮೋಂಟಡ್ಕ ಅವರಿಗೆ ‘ಶ್ರೀಮತಿ ಸುಭದ್ರಾ ಜಂಗಮಶೆಟ್ಟಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 10 ಸಾವಿರ ರೂ., ಸ್ಮರಣಿಕೆ ಹಾಗೂ ಶಾಲು ಒಳಗೊಂಡಿದೆ. ಕಲಾವಿದರಾದ ದಯಾನಂದ ಬೀಳಗಿ, ಗೀತಾ ಮೋಂಟಡ್ಕ ಪ್ರಶಸ್ತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ರಂಗ ನಿರ್ದೇಶಕ ಎಲ್.ಬಿ.ಶೇಖ್‌ಮಾಸ್ತರ್, ರಂಗಸಂಗಮ ಕಲಾವೇದಿಕೆ ಅಧ್ಯಕ್ಷೆ ಶಿವಗೀತಾ ಬಸವಪ್ರಭು, ಕಪೀಲ್, ಸೇರಿದಂತೆ ಹಲವರು ಇದ್ದರು.
ಸಾಹಿತಿ ಬಿ.ಎಚ್.ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.