×
Ad

ಕಲಬುರಗಿ | ಸರಕಾರಿ ಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿದ 1,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ : ಡಾ.ಅಬ್ದುಲ್ ಖದೀರ್

Update: 2025-05-26 17:15 IST

ಕಲಬುರಗಿ : ಸರಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಓದುತ್ತಿರುವ ಕನ್ನಡ ಮತ್ತು ಗ್ರಾಮೀಣ ಮಾಧ್ಯಮದ ಪ್ರತಿಭಾವಂತ 1,000 ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ವಿಶೇಷ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಅಬ್ದುಲ್ ಖದೀರ್ ಹೇಳಿದ್ದಾರೆ.

ಸೋಮವಾರ ನಗರದ ಶಾಹೀನ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕನ್ನಡ, ಉರ್ದು ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಂತಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಆಯ್ಕೆಯಾದ ಬಳಿಕ ದೇಶದ ವಿವಿಧ ಭಾಗಗಳಲ್ಲಿರುವ ಶಾಹೀನ್ ಪಿಯು ಕಾಲೇಜುಗಳಲ್ಲಿ ಶೇ.75ರಷ್ಟು ಟ್ಯೂಷನ್ ಶುಲ್ಕದಿಂದ ವಿನಾಯಿತಿ ನೀಡಲಾಗುವುದು. ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿರುವ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.

ಈ ವಿದ್ಯಾರ್ಥಿವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳು ತಮ್ಮ ಸಮೀಪದ ಶಾಹೀನ್ ಕಾಲೇಜುಗಳಿಗೆ ಭೇಟಿ ನೀಡಿ ಅಥವಾ ಸಂಸ್ಥೆಯ ವೆಬ್ ಸೈಟ್ www.shaheengroup.org ಗೆ ಭೇಟಿ ನೀಡಿ ಮೇ 15ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೇ 18ರಂದು ಆಯಾ ವ್ಯಾಪ್ತಿಯ ಶಾಹೀನ್ ಕಾಲೇಜುಗಳಲ್ಲಿ ಸಂದರ್ಶನ ನಡೆಸಲಾಗುತ್ತಿದೆ. ಕನ್ನಡ ಮಾಧ್ಯಮ, ಗ್ರಾಮೀಣ ಭಾಗದವರು, ವಿಕಲಚೇತನರು ಹಾಗೂ ಅನಾಥ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

'ಕೇರ್ಸ್ ' ಯೋಜನೆಯಿಂದ ವಿದ್ಯಾರ್ಥಿ ವೇತನ :

‘ಕೇರ್ಸ್’(ಕಮ್ಯೂನಿಟಿ ಐಡ್ ಆ್ಯಂಡ್ ರೆಸ್ಪಾನ್ಸ್ ಫಾರ್ ಎಜುಕೇಶನಲ್ ಸಪೋರ್ಟ್) ಎಂಬ ಯೋಜನೆಯು ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ. ಇದರಡಿಯಲ್ಲಿ ಮಸೀದಿ, ಬೈತುಲ್ ಮಾಲ್, ದೇವಸ್ಥಾನ, ಚರ್ಚ್‍ನಂತಹ ಧಾರ್ಮಿಕ ಕೇಂದ್ರಗಳು ಅತ್ಯಂತ ಬಡ ಕುಟುಂಬದ ಮಕ್ಕಳನ್ನು ಅವರೇ ಗುರುತಿಸಿ ಅವರ ಶೈಕ್ಷಣಿಕ ವೆಚ್ಚದ ಶೇ.40ರಷ್ಟು ಪಾವತಿಸಲು ಮುಂದೇ ಬಂದರೆ ನಮ್ಮ ಸಂಸ್ಥೆಯು ಶೇ.60ರಷ್ಟು ವಿದ್ಯಾರ್ಥಿವೇತನ ನೀಡಲು ಸಿದ್ಧವಿದೆ ಎಂದು ಮಾಹಿತಿ ನೀಡಿದರು.

ಮದ್ರಸಾ ವಿದ್ಯಾರ್ಥಿಗಳಿಗೆ ಬ್ರಿಜ್ ಕೋರ್ಸ್ :

ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಶಾಹೀನ್ ಸಂಸ್ಥೆಯ ಆಶ್ರಯದಲ್ಲಿ 100 ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆ ಲೌಕಿಕ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ, ಈ ಯೋಜನೆಯಡಿಯಲ್ಲಿ ಶಾಲೆಯನ್ನು ಅರ್ಧಕ್ಕೆ ತೊರೆದಿರುವಂತಹ 12 ವರ್ಷ ಮೇಲ್ಪಟ್ಟ ಸುಮಾರು 2,000 ಮಕ್ಕಳ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಅವರಿಗೆ ವಿಶೇಷ ತರಬೇತಿ ನೀಡಿ ಎರಡು ವರ್ಷಗಳಲ್ಲಿ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡಲಾಗುವುದು ಎಂದರು.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಫಲಿತಾಂಶ ಕಡಿಮೆ ಬಂದಿರುವ ಹಿನ್ನೆಲೆಯಲ್ಲಿ 'ಎಐಸಿ'-(ಅಕಾಡಮಿ ಇಂಟೆನ್ಸಿವ್ ಕೇರ್) ಎಂಬ ವಿಶೇಷ ಯೋಜನೆಯನ್ನು ತರಲು ಯೋಜಿಸಿದ್ದೇವೆ. ಇದರಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಿಸುವುದರ ಜೊತೆಗೆ ಶಿಕ್ಷಕರ ಪಾಠ ಮತ್ತಿತರ ಬೋಧನೆಗಳ ಕುರಿತಾಗಿ ರಚನಾತ್ಮಕ ತರಬೇತಿ ನೀಡಲು ಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಟ್ಯೂಶನ್ ಎಂಬ ರೋಗದಿಂದ ಮುಕ್ತರನ್ನಾಗಿ ಮಾಡುವ ಧ್ಯೇಯ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇಕ್ಬಾಲ್ ಅಹ್ಮದ್, ಜಾಫರ್ ಸಾಬ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News