ಕಲಬುರಗಿ | ಈಶಾನ್ಯ ವಲಯದ ಡಿಐಜಿಪಿಯಾಗಿ ಶಾಂತನು ಸಿನ್ಹಾ ಅಧಿಕಾರ ಸ್ವೀಕಾರ
Update: 2025-07-19 19:52 IST
ಕಲಬುರಗಿ: ಈಶಾನ್ಯ ವಲಯದ ಡಿಐಜಿಪಿಯಾಗಿ 2009ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಶಾಂತನು ಸಿನ್ಹಾ ಅವರು ನಗರದ ಐಜಿಪಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಅಜಯ್ ಹಿಲೋರಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಈಶಾನ್ಯ ವಲಯದ ಡಿಐಜಿಪಿ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಶಾಂತನು ಸಿನ್ಹಾ ಅವರನ್ನು ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿತ್ತು.
ಜು.14ರಂದು ಹೊರಡಿಸಿದ್ದ ಆದೇಶದಲ್ಲಿ ಐಪಿಎಸ್ ಅಧಿಕಾರಿ ಡಾ.ಚಂದ್ರಗುಪ್ತ ಅವರನ್ನು ಈ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಗುರುವಾರ ವರ್ಗಾವಣೆ ಪಟ್ಟಿಯನ್ನು ಮಾರ್ಪಾಡು ಮಾಡಲಾಗಿದ್ದು, ಚಂದ್ರಗುಪ್ತ ಅವರು ಗುಪ್ತಚರ ವಿಭಾಗದ ಐಜಿಪಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ಡಿಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಶಾಂತನು ಸಿನ್ಹಾ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅಭಿನಂದನೆ ಸಲ್ಲಿಸಿದರು.