×
Ad

ಕಲಬುರಗಿ | ಜೀವನದ ಮೌಲ್ಯಗಳನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಬಿತ್ತಿ ಬೆಳೆಸಿದೆ: ಡಾ.ಸವಿತಾ ತಿವಾರಿ

Update: 2025-09-12 19:44 IST

ಕಲಬುರಗಿ: ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಈ ಸಮಾಜದಲ್ಲಿ ಗುಣಮಟ್ಟ ಶಿಕ್ಷಣ, ಉತ್ತಮ ಸಂಸ್ಕೃತಿ, ಜೀವನದ ಮೌಲ್ಯಗಳನ್ನು ಬಿತ್ತಿ ಬೆಳೆಸಿದೆ ಎಂದು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ) ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅಭಿಪ್ರಾಯ ಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪತ್ರಿಕೋದ್ಯಮ ಶಿಕ್ಷಣ ಈ ಸಮಾಜಕ್ಕೆ ಅವಶ್ಯಕವಿದೆ. ಭಾವಿಪತ್ರಕರ್ತರಾಗಿ ಹೊರ ಹೊಮ್ಮುವ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಪ್ರಾಮಾಣಿಕ ಪತ್ರಕರ್ತರಾಗಿ ಹೊರಹೊಮ್ಮಲಿ ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಪತ್ರಿಕೋದ್ಯಮ ಎನ್ನುವುದು ಒಂದು ಅತ್ಯಂತ ಉನ್ನತ ಮಟ್ಟದ ಕ್ಷೇತ್ರವಾಗಿ ಬೆಳೆದು ನಿಂತಿದೆ. ಪತ್ರಿಕೆ ಮತ್ತು ಮಾಧ್ಯಮಗಳು ಜನರ ಕಣ್ಣು-ಕಿವಿಗಳಂತಿವೆ. ನಿಜವಾದ ಮಾಹಿತಿ ತಲುಪಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲಯ ಡೀನ್‍ರಾದ ಡಾ.ಲಕ್ಷ್ಮಿ ಪಾಟೀಲ ಮಾಕಾ ಅವರು, ವಿದ್ಯಾರ್ಥಿಗಳು ಉತ್ತಮ ಪತ್ರಕರ್ತರಾಗಿ ಈ ಸಂಸ್ಥೆಯ ಬಾಗಿಲು ಸದಾ ನಿಮಗಾಗಿ ತೆರೆದಿರುತ್ತದೆ. ನಿಮ್ಮ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.

ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕತೆ, ನಿಷ್ಠೆ ಮತ್ತು ಧೈರ್ಯ ಅತ್ಯಂತ ಮುಖ್ಯ. ಸುದ್ದಿಯನ್ನು ಸಂಗ್ರಹಿಸುವಾಗ ಸತ್ಯವನ್ನು ಮಾತ್ರ ಸಮಾಜದ ಮುಂದಿಡಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿದ್ದರೂ ಅದರೊಂದಿಗೆ ನಿಖರತೆ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಪತ್ರಕರ್ತರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜ ವಿಜ್ಞಾನ ನಿಕಾಯದ ಡೀನ್ ಟಿ.ವಿ. ಶಿವಾನಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ.ಸುನಿತಾ ಬಿ.ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸುಮಂಗಲಾ ರೆಡ್ಡಿ, ಆಂಗ್ಲ ಮುಖ್ಯಸ್ಥರಾದ ಡಾ.ಎಸ್.ಎಸ್.ಪಾಟೀಲ, ಡಾ.ಶಾಮಲಾ, ಪ್ರೊ.ಅಶ್ವಿನಿ ರೆಡ್ಡಿ, ಅನಿತಾ ಗಾಯಧನ್‍ಕರ್, ನಿರ್ಮಲಾ ದೊರೆ, ಅಮರ ನಡುವಿನಕೇರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿ ಆಕಾಶ ಅಥರ್ಗ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಐಶ್ವರ್ಯ ಹೀರೆಮಠ ಪ್ರಾರ್ಥನೆ ಗೀತೆ ಹಾಡಿದರು. ಸುಪ್ರೀಯಾ ಯಂಕಂಚಿ ವಂದಿಸಿದರು.

ಕಾರ್ಯಕ್ರಮದಲ್ಲಿ ದ್ವಿತೀಯ ಹಾಗೂ ನಾಲ್ಕನೇ ಸೆಮೆಸ್ಟರ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಹಲವು ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News