ಕಲಬುರಗಿ | ರಾಜ್ಯ ಬಜೆಟ್‌ನಿಂದ ಎಲ್ಲ ವರ್ಗದವರಿಗೆ ಅನುಕೂಲ : ಪ್ರಿಯಾಂಕ್ ಖರ್ಗೆ
ಕಲಬುರಗಿ : ರಾಜ್ಯ ಬಜೆಟ್ ಅನ್ನು ಎಲ್ಲ ವರ್ಗದವರನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಅನುದಾನ ಬಳಕೆಯೂ ಕೂಡಾ ಅದೇ ಮಾನದಂಡ ಅನುಸರಿಸಿ ಉಪಯೋಗಿಸಲಾಗುತ್ತಿದೆ. ಪ್ರಗತಿ ಪಥ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿ ಆಗುತ್ತಿರುವ ಅಭಿವೃದ್ದಿ ಹಾಗೂ ಗ್ಯಾರಂಟಿ ಯೋಜನೆಗಳು ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುತ್ತವೆಯೇ? ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಣಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರು ಆರೋಗ್ಯವಂತರಾಗಿರಲಿ. ಅವರ ಸಿದ್ದಾಂತಗಳು ನಮಗೆ ಒಪ್ಪುವುದಿಲ್ಲ, ಕೋಮು ವಿಷ ಬೀಜ ಬಿತ್ತಿದವರು ನಮ್ಮ ಕಡೆ ಬರೋದು ಬೇಡ, ಅವರ ಈ ಹಿಂದೆ ಯಾವ ಯಾವ ರೀತಿ ಫೋಟೋ ತೆಗೆಸಿಕೊಂಡಿದ್ದರು ಎಂದು ಬಿಜೆಪಿ ಪಕ್ಷದ ಅಧ್ಯಕ್ಷರು ವೈರಲ್ ಮಾಡುತ್ತಿದ್ದಾರಲ್ಲ ಅಷ್ಟೆ ಸಾಕು ಎಂದು ಹೇಳಿದರು.
ಬಿಜೆಪಿ ಶಾಸಕರ ಸಸ್ಪೆಂಡ್ ವಿಚಾರ ಪ್ರತಿಕ್ರಿಯಿಸಿದ ಅವರು, ವಿಧಾನಸಭಾ ಅಧ್ಯಕ್ಷರ ಬಗ್ಗೆ ಅಗೌರವವಾಗಿ ನಡೆದುಕೊಂಡರೆ ಪ್ರಶಸ್ತಿ ಕೊಡಬೇಕಾ? ನಾನಾಗಿದ್ದರೆ ಒಂದು ವರ್ಷ ಸಸ್ಪೆಂಡ್ ಮಾಡುತ್ತಿದ್ದೆ ಎಂದು ತಿಳಿಸಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಬೋಗಸ್ :
ರಾಜ್ಯದಲ್ಲಿ ಬಿಜೆಪಿ ಮಾಡಲು ಸಿದ್ಧವಾಗಿರುವ ಜನಾಕ್ರೋಶ ಯಾತ್ರೆಯನ್ನು ಬೋಗಸ್ ಯಾತ್ರೆ ಎಂದು ಟೀಕಿಸಿದ ಸಚಿವರು, ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎನ್ನುವ ಬಗ್ಗೆ ಚರ್ಚೆ ನಡೆಸಲಿ. ಅಭಿವೃದ್ದಿ ಕೆಲಸಗಳು ಎಷ್ಟು ನಡೆದಿವೆ ಎನ್ನುವ ಬಗ್ಗೆ ಹೇಳಲಿ. ಜಲಜೀವನ ಮಿಷನ್ ಯೋಜನೆಗೆ ಕೇಂದ್ರ ಹಾಗೂ ರಾಜ್ಯ 50/50 ಅನುಪಾತದಲ್ಲಿ ಅನುದಾನ ಬಿಡುಗಡೆಯಾಗಬೇಕಿತ್ತು. 3,200 ಕೋಟಿ ರೂ. ನಲ್ಲಿ ಕೇವಲ 517 ಕೋಟಿ ರೂ. ಮಾತ್ರ ಬಂದಿದೆ. ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದರೆ, ರಾಜ್ಯ ಸರ್ಕಾರದಿಂದ ಹಣ ಖರ್ಚು ಮಾಡಿದರೆ ಮುಂದಿನ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡುವುದಾಗಿ ಉತ್ತರ ಬರೆದಿದ್ದಾರೆ ಎಂದು ಹೇಳಿದರು.
ಬಿಜೆಪಿ ಜನಾಕ್ರೋಶ ಯಾತ್ರೆಗೆ ಜೆಡಿಎಸ್ ಗೈರು ಹಾಜರಿ ಬಗ್ಗೆ ಮಾತನಾಡಿ ಅವರು, ಯಾರು ಭಾಗಿಯಾಗುತ್ತಾರೋ ಬಿಡುತ್ತಾರೋ ಅದು ನಮಗೆ ಸಂಬಂಧಪಡದ ವಿಚಾರ. ಅದು ಗಂಡ ಹೆಂಡತಿ ಜಗಳ ಎಂದು ಬಿಜೆಪಿ ಜೆಡಿಎಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಚ್ಚಾ ತೈಲದ ಬೆಲೆ ಏರಿಕೆಯೆ ಕಾರಣ. ಕೇಂದ್ರ ಕಚ್ಚಾ ತೈಲದ ಬೆಲೆ ಇಳಿಸಲಿ, ಆಗ ಇಲ್ಲಿಯೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಯಲಿದೆ. ರಾಷ್ಟ್ರದ ಆರ್ಥಿಕತೆ ನಮ್ಮ ಕೈಲಿಲ್ಲ. ಅವರು ಬೆಲೆ ಜಾಸ್ತಿ ಮಾಡಿದರೆ ಅದು ರಾಷ್ಟ್ರ ಬಲಿಷ್ಠತೆಗೆ ಪೂರಕ ಎನ್ನುತ್ತಾರೆ, ನಾವು ಬೆಲೆ ಹೆಚ್ಚಿಸಿದರೆ ಜನರಿಗೆ ತೊಂದರೆ ಎನ್ನುತ್ತಾರೆ. ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ ಹಣ ಹೋಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್ ಇದ್ದರು.