ಕಲಬುರಗಿ | ಕಾಲೇಜಿನ ಶುಲ್ಕ ಪಾವತಿಸಲಾಗದೆ ವಿದ್ಯಾರ್ಥಿನಿ ಆತ್ಮಹತ್ಯೆ
ಕಲಬುರಗಿ : ಕಾಲೇಜಿನ ಶುಲ್ಕ ಪಾವತಿಸದೇ ಆಗದಿರುವ ಕಾರಣದಿಂದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಚೌಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಖಾಸಗಿ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್ ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಹಾಗೂ ನಗರದ ತಾಜ್ ಸುಲ್ತಾನಪುರ ನಿವಾಸಿ ಭಾಗ್ಯಶ್ರಿ ಚಿಟಗುಪ್ಪಿ ಮೃತ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಗೆ ತಂದೆಯೂ ಇಲ್ಲ, ಬಿಸಿಎ ಕೋರ್ಸ್ ಮಾಡು ಎಂದು ಹೇಳಿದರೂ ಕೇಳಿರಲಿಲ್ಲ. ಬಳಿಕ 1.25 ಲಕ್ಷ ರೂ. ಕೊಟ್ಟು ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಳು. 3ನೇ ಸೆಮಿಸ್ಟರ್ ಶುಲ್ಕ ಕಟ್ಟಲು ಸೆ.10 ಕೊನೆ ದಿನವಾಗಿತ್ತು. ಶುಲ್ಕ ಪಾವತಿಸುವಂತೆ ನನ್ನ ಬಳಿ ಕೇಳಿದ್ದಳು. ಅಷ್ಟೊಂದು ಹಣ ಕಟ್ಟಲು ಆಗಲ್ಲ ಎಂದು ಹೇಳಿ ನಾನು ಅಂಗನವಾಡಿಗೆ ಹೋಗಿದ್ದೆ. ನನ್ನ ಇನ್ನೊಬ್ಬ ಮಗಳು ಶಾಲೆಗೆ ಹೋಗಿದ್ದಳು. ಮೂರನೇ ಸೆಮಿಸ್ಟರ್ ಶುಲ್ಕ ಕಟ್ಟದಿರುವುದನ್ನು ಮನಸ್ಸಿಗೆ ತೆಗೆದುಕೊಂಡು ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಾಯಿ ಅಂಗನವಾಡಿ ಶಿಕ್ಷಕಿ ಮಹಾನಂದಾ ಚಿಟಗುಪ್ಪಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ತಾಯಿಯ ದೂರಿನ ಮೇರೆಗೆ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.