ಕಲಬುರಗಿ | ಚಪಾತಿ ವಿಚಾರಕ್ಕೆ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಹೊಡೆದಾಟ
ಕಲಬುರಗಿ : ಹಾಸ್ಟೆಲ್ ನಲ್ಲಿ ಚಪಾತಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಪರಸ್ಪರ ಹೊಡೆದಾಟ ನಡೆದಿರುವ ಘಟನೆ ಆಳಂದ ತಾಲೂಕಿನ ಕಡಗಂಚಿ ಸಮೀಪದಲ್ಲಿರುವ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.
ಗುರುವಾರ ವಿದ್ಯಾರ್ಥಿಯೋರ್ವ ಹಾಸ್ಟೆಲ್ ನಲ್ಲಿ 25ಕ್ಕೂ ಹೆಚ್ಚು ಚಪಾತಿಗಳನ್ನು ತೆಗೆದುಕೊಂಡಿರುವ ಪರಿಣಾಮ, ಪರಸ್ಪರ ಬೈದಾಟ ಮತ್ತು ಹೊಡೆದಾಟ ನಡೆದಿದ್ದವು. ಘಟನಾ ಸ್ಥಳಕ್ಕೆ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ಮತ್ತೆ ವಿದ್ಯಾರ್ಥಿಗಳ ಮಧ್ಯೆ ಜಗಳ ಮುಂದುವರೆದಿದ್ದು, ಈ ಕಿತ್ತಾಟ ಇದೀಗ ಉತ್ತರ ಭಾರತೀಯ ವಿದ್ಯಾರ್ಥಿ V/S ದಕ್ಷಿಣ ಭಾರತದ ವಿದ್ಯಾರ್ಥಿಗಳ ನಡುವಿನ ಗುಂಪುಗಾರಿಕೆ ಹೊಡೆದಾಟವಾಗಿ ಮಾರ್ಪಟ್ಟಿರುವ ಪರಿಣಾಮ 3ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿದ್ದು, ಯಾವುದೇ ರೀತಿ ದೊಡ್ಡ ಸಮಸ್ಯೆ ಆಗಿಲ್ಲ, ಆಹಾರದ ವಿಚಾರಕ್ಕೆ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.