×
Ad

ಕಲಬುರಗಿ: ಚಿತ್ತಾಪುರದಲ್ಲಿ ಆಯೋಜಿಸಿದ್ದ ಆರೆಸ್ಸೆಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ಆದೇಶ

Update: 2025-10-19 09:42 IST

ಸಾಂದರ್ಭಿಕ ಚಿತ್ರ PC: x.com/VSKKarnataka

ಕಲಬುರಗಿ: ರವಿವಾರ ಮಧ್ಯಾಹ್ನ 3 ಗಂಟೆಗೆ ಚಿತ್ತಾಪುರ ಪಟ್ಟಣದಲ್ಲಿ ಆರೆಸ್ಸೆಸ್ ಹಮ್ಮಿಕೊಂಡಿದ್ದ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ, ಚಿತ್ತಾಪುರ ತಹಶೀಲ್ದಾ‌ರ್ ನಾಗಯ್ಯ ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟುವ ಸಲುವಾಗಿ ಅನುಮತಿ ನಿರಾಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಆರೆಸ್ಸೆಸ್ ಜಿಲ್ಲಾ ವ್ಯವಸ್ಥಾಪಕ ಪ್ರಹ್ಲಾದ ವಿಶ್ವಕರ್ಮ ಅವರಿಗೆ ಶನಿವಾರ ರಾತ್ರಿ ಪತ್ರ ಬರೆದಿರುವ ತಹಶೀಲ್ದಾರ್ ನಾಗಯ್ಯ ಅವರು, ಪಥ ಸಂಚಲನ ನಡೆಸುವ ರವಿವಾರ ದಿನದಂದೇ ಭೀಮ್ ಆರ್ಮಿ ಮತ್ತು ದಲಿತ ಪ್ಯಾಂಥರ್ ಸಂಘಟನೆಯವರು ಚಿತ್ತಾಪುರ ಪಟ್ಟಣದಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ. ಹೀಗಾಗಿ ಒಂದೇ ಸಮಯದಲ್ಲಿ ಪಥ ಸಂಚಲನಕ್ಕೆ ಎಲ್ಲಾ ಸಂಘಟನೆಗಳು ಅನುಮತಿ ಕೇಳಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ಹೆಚ್ಚು. ಹಾಗಾಗಿ ಅನುಮತಿ ನೀಡಬಾರದು ಎಂದು ಪೊಲೀಸ್‌ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರವಾಗಿರುವ ಚಿತ್ತಾಪುರ ಪಟ್ಟಣದಲ್ಲಿ ಆರೆಸ್ಸೆಸ್ ಪಥ ಸಂಚಲನ ನಿಮಿತ್ತ ಭಗವಾಧ್ವಜ, ಬ್ಯಾನ‌ರ್ ಹಾಗೂ ಬಂಟಿಂಗ್ಸ್ ಗಳನ್ನು ಅಳವಡಿಸಲಾಗಿತ್ತು. ಇದಕ್ಕೆ ಸೂಕ್ತ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಪುರಸಭೆ ಅಧಿಕಾರಿಗಳು ಶನಿವಾರ ನಸುಕಿನಲ್ಲಿಯೇ ಅವುಗಳನ್ನು ತೆರವು ಮಾಡಿದ್ದರು. ಈಗ ಸ್ವತಃ ತಹಶೀಲ್ದಾ‌ರ್ ಅವರೇ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿ ಆದೇಶ ಪ್ರಕಟಿಸಿದ್ದಾರೆ.





 



 




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News