ಕಲಬುರಗಿ | ಆಳಂದ-ಭೂಸನೂರ ಸಂಪರ್ಕಿಸುವ ಸೇತುವೆ ಜಲಾವೃತ
ಕಲಬುರಗಿ: ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದಿಂದ ಭೂಸನೂರ ಕಾರ್ಖಾನೆ ಕಡೆಗೆ ಹಾಗೂ ಆಳಂದಕ್ಕೆ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಆಳಂದ ತಾಲ್ಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಒಡೆದುಹೋಗಿವೆ. ಸಣ್ಣ ಸಣ್ಣ ಸೇತುವೆಗಳು ಕೊಚ್ಚಿ ಹೋಗಿದ್ದು, ಸಂಚಾರಕ್ಕೆ ವಾಹನ ಸವಾರರು ಪರದಾಡುವಂತಾಗಿದೆ.
ಆಳಂದ ತಾಲ್ಲೂಕಿನ ಕೊರಳ್ಳಿ ಗ್ರಾಮದ ಹತ್ತಿರ ಇರುವ ಅಮರ್ಜಾ ಅಣೆಕಟ್ಟಿನಿಂದ ನೀರು ಹರಿದುಬರುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಿಸುವಂತಾಗಿದೆ.
ಭೂಸನೂರ ಗ್ರಾಮದ ಸಮೀಪ ಇರುವ ಹಳೆಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಹಾಗಾಗಿ ಭೂಸನೂರಿನಿಂದ ಆಳಂದಕ್ಕೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೂಡಲೇ ಮುಳುಗಡೆಯಾಗಿರುವ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಅಲ್ಲಿನ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗುಂಡೇರಾವ್ ಯಲಶೆಟ್ಟಿ, ಈರಣ್ಣ ಜಮಗಿ, ಚಂದ್ರಶೇಖರ್ ನಾಟಿಕಾರ, ಲಕ್ಷ್ಮಣ್ ಕೊತಲಿ, ಕಿಸಾನ್ ಲಾವಟೆ, ರಾಜಶೇಖರ್ ಮೈನಾಳ ಸೇರಿದಂತೆ ಹಲವರು ಸೇತುವೆ ದುರಸ್ತಿಗೆ ಒತ್ತಾಯಿಸಿದ್ದಾರೆ.