×
Ad

ಕಲಬುರಗಿ | ಧಾರಾಕಾರ ಮಳೆಯಿಂದಾಗಿ ಸೇತುವೆ ಜಲಾವೃತ : ರೈಲು ಸಂಚಾರದಲ್ಲಿ ವ್ಯತ್ಯಯ

Update: 2025-09-24 15:32 IST

ಕಲಬುರಗಿ : ಧಾರಾಕಾರ ಸುರಿದ ಮಳೆಯಿಂದ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಾಕಿನಿ–ಮುಂಡೇವಾಡಿ ರೈಲು ನಿಲ್ದಾಣಗಳ ನಡುವೆ ಇರುವ ನದಿ ಸೇತುವೆ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಕಲಬುರಗಿಯಿಂದ ಮುಂಬೈ ಮತ್ತು ಪುಣೆಯ ಕಡೆಗೆ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಚೆನ್ನೈನಿಂದ ಮುಂಬೈಗೆ ಹೊರಡುವ 12164 ರೈಲು ಮತ್ತು ಬೆಂಗಳೂರಿನಿಂದ ಮುಂಬೈಗೆ ಹೋಗುವ ಉದ್ಯಾನ ಎಕ್ಸ್‌ಪ್ರೆಸ್‌ (11302) ರೈಲುಗಳು ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಬೀದರ್–ಲಾತುರ್–ಕುರ್ದವಾಡಿ ಮಾರ್ಗದ ಮೂಲಕ ಸಂಚರಿಸಲಿವೆ ಎಂದು ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕ ಪಿ.ಜೆ. ಜಿಜಿಮೊನ್ ತಿಳಿಸಿದ್ದಾರೆ.

ಇದೇ ವೇಳೆ, ಬೆಂಗಳೂರಿನಿಂದ ದೆಹಲಿಗೆ ಹೊರಟ ಕರ್ನಾಟಕ ಎಕ್ಸ್‌ಪ್ರೆಸ್‌ (1227) ಕಲಬುರಗಿ ರೈಲು ನಿಲ್ದಾಣದಿಂದ ಬೆಳಗ್ಗೆ ಹೊರಟಿದ್ದು, ಇದೀಗ ಕಲಬುರಗಿ - ಸೋಲಾಪುರ ರೈಲು ನಿಲ್ದಾಣದ ಮಧ್ಯೆ ನಿಂತಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಕಲಬುರಗಿಯಿಂದ ಕೊಲ್ಹಾಪುರಕ್ಕೆ ಹೋಗುವ ಕೊಲ್ಹಾಪುರ ಎಕ್ಸ್‌ಪ್ರೆಸ್‌ ಹಾಗೂ ಕಲಬುರಗಿ - ಬೀದರ್ ಪ್ಯಾಸೆಂಜರ್ ಡೆಮೋ ರೈಲು ರದ್ದುಪಡಿಸಲಾಗಿದೆ ಎಂದು ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.

ಪ್ರಯಾಣಿಕರ ಪರದಾಟ :

ಚೆನ್ನೈ ಹಾಗೂ ಬೆಂಗಳೂರಿನಿಂದ ಮುಂಬೈ, ದೆಹಲಿ ಕಡೆಗೆ ಹೋಗುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿರುವ ಕಾರಣದಿಂದ ಅಂತರ್‌ ರಾಜ್ಯ ಪ್ರಯಾಣಿಕರು ಪರದಾಡಿರುವ ಘಟನೆ ಕಲಬುರಗಿ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆಯಿಂದ ನಡೆದಿದೆ.

ರೈಲಿಗಾಗಿ ಬೆಳಗ್ಗೆ 8 ಗಂಟೆಯಿಂದ ಇಲ್ಲೆ ಕಾಯುತ್ತಿದ್ದೇವೆ. ರೈಲು ಯಾಕಿಷ್ಟು ತಡ ಎಂದು ನಮಗೆ ಮಾಹಿತಿ ನೀಡಲಿಲ್ಲ. ಒಂದೆರಡು ಗಂಟೆಯ ಬಳಿಕ ನಾವೇ ಸ್ಟೇಷನ್ ಮಾಸ್ಟರ್ ಬಳಿ ಹೋದಾಗ ವಿಷಯ ತಿಳಿದಿದೆ. ರೈಲು ಸಂಚಾರದಲ್ಲಿ ತಡವಾಗಲಿದೆ ಎಂದು ಮಧ್ಯಾಹ್ನವಾದರೂ ಇಲಾಖೆ ಯಾವುದೇ ರೀತಿಯಲ್ಲಿ ನಮ್ಮ ಸಹಕಾರಕ್ಕೆ ಬರಲಿಲ್ಲ ಎಂದು ಮುಂಬೈಗೆ ತೆರಳುತ್ತಿದ್ದ ರೈಲು ಪ್ರಯಾಣಿಕ ತುಷಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸೋಲಾಪುರ ಸಮೀಪದ ಪಾಕಿನಿ - ಮುಂಡೇವಾಡಿ ರೈಲು ನಿಲ್ದಾಣಗಳ ಮಧ್ಯೆ ನದಿ ಸೇತುವೆಯಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದೇವೆ. ಕೆಲವು ರೈಲುಗಳು ರದ್ದುಪಡಿಸಿದ್ದೇವೆ.

-ಪಿ.ಜೆ. ಜಿಜಿಮೊನ್ ( ಕಲಬುರಗಿ ರೈಲು ನಿಲ್ದಾದ ವ್ಯವಸ್ಥಾಪಕ)

                                               ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕ

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News