×
Ad

ಕಲಬುರಗಿ: ಮರ್ಯಾದಾ ಹತ್ಯೆಗೈದ ಇಬ್ಬರು ಸಹೋದರರಿಗೆ ಗಲ್ಲು ಶಿಕ್ಷೆ; ಕುಟುಂಬದ ಐವರಿಗೆ ಜೀವಾವಧಿ ಸಜೆ

Update: 2025-10-11 08:48 IST

ಕಲಬುರಗಿ: ಸಹೋದರಿಗೆ ಮರ್ಯಾದೆ ಹತ್ಯೆ ಮಾಡಿದ ಇಬ್ಬರು ಸಹೋದರರಿಗೆ ಮರಣ ದಂಡನೆ ಹಾಗೂ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ನೀಡಿ ಇಲ್ಲಿನ ಕರ್ನಾಟಕ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ ಈತನ ಸಹೋದರ ಲಾರಿ ಚಾಲಕ ಅಕ್ಟರ್ (28) ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದಾರೆ. ಮತ್ತು ಅದೇ ಕುಟುಂಬದ ಐವರಿಗೆ ಜೀವಾವಧಿ ಸಜೆ ವಿಧಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ತಮ್ಮ ತಂಗಿಯನ್ನೇ ಬೆಂಕಿ ಹಚ್ಚಿ ಜೀವಂತವಾಗಿ ಸಹೋದರರು ಸುಟ್ಟು ಹಾಕಿದ್ದರು.

ಗಲ್ಲುಶಿಕ್ಷೆಗೆ ಒಳಗಾದವರ ಸಹೋದರರ ತಂಗಿ ಬಾನು ಬೇಗಂ ಅವರು, ಸೈಬಣ್ಣ ಎನ್ನುವ ದಲಿತ ಯುವಕನ ಜೊತೆ ಪ್ರೀತಿಸಿ ಮದುವೆಯಾಗಿದ್ದಳು. ಬಾನು ಬೇಗಂ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ವೇಳೆಯಲ್ಲೇ ಆಕೆಯ ಸಹೋದರರೇ ಬೆಂಕಿ ಹಚ್ಚಿ ಜೀವಂತವಾಗಿ ಹತ್ಯೆ ಮಾಡಿದ್ದರು.

2017 ರಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ತಾಳಿಕೋಟೆ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣದಂಡನ ಶಿಕ್ಷೆ ಹಾಗೂ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಕಲಬುರಗಿ ಹೈಕೋರ್ಟ್‌ ದ್ವಿ ಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದ ಈ ಪ್ರಕರಣವನ್ನು ವಿಜಯಪುರ ಕೋರ್ಟಿನ ಆದೇಶವನ್ನು ಮಾನ್ಯ ಮಾಡಿದೆ.

ಕೊಲೆಯಾದ ಬಾನು ಬೇಗಂನ ತಾಯಿ ಸೇರಿದಂತೆ ಕುಟುಂಬದ ಒಟ್ಟಾರೆ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಸರ್ಕಾರಿ ಅಭಿಯೋಜಕ ಸಿದ್ದಲಿಂಗ ಪಾಟೀಲ್‌ ಅವರು ಹೈಕೋರ್ಟ್ ತೀರ್ಪಿನ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News