ಕಲಬುರಗಿ | ಗ್ರಾಮ ಪಂಚಾಯತ್ ಮಟ್ಟದಲ್ಲಿ ನಲ್ಲಿಯ ನೀರು ಪೋಲಾಗದಂತೆ ಬಳಸಿ : ಸಿಇಓ ಭಂವರ್ ಸಿಂಗ್ ಮೀನಾ
ಕಲಬುರಗಿ : ಗ್ರಾಮ ಪಂಚಾಯತ್ ಮಟ್ಟದಲ್ಲಿ ನಳದ ನೀರು ಅವಶ್ಯಕತೆಗೆ ಅನುಗುಣವಾಗಿ ಬಳಸಿ, ನೀರು ಪೋಲಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಹೇಳಿದರು.
ಮಂಗಳವಾರದಂದು ಕಲಬುರಗಿ ನಗರದ ಜಿಟಿಟಿಸಿ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯಾಬಿವೃದ್ಧಿ ನಿಗಮ, ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಜಿಟಿಟಿಸಿ ಸಹಯೋಗದೊಂದಿಗೆ ನಲ್-ಜಲ್, ಯೋಜನೆಯಡಿ ನೀರು ವಿತರಣಾ ನಿರ್ವಾಹಕರು ಜಾಬಾ ರೋಲ್ ಕುರಿತು ಪ್ರತಿ ಗ್ರಾಮ ಪಂಚಾಯತಿಯಿಂದ ಆಯ್ಕೆಯಾಗಿರುವ 2 ಮಹಿಳಾ ನಲ್ ಜಲ್ ಮಿತ್ರ ರವರಿಗೆ ಆಯೋಜಿಸಿದ 40 ದಿನಗಳ ತರಬೇತಿಯ ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.
ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ "ಜಲಜೀವನ ಮಿಷನ್" ಅಡಿ ನಲ್‍ಜಲ್ ಮಿತ್ರ ಯೋಜನೆ ಜಾರಿ ತರಲಾಗಿದೆ ಎಂದರು.
ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗಂಗೂಬಾಯಿ ಅವರು ಮಾತನಾಡಿ, ಇಂದಿನ ಜೀವನದಲ್ಲಿ ಬುದ್ದಿವಂತರಿಗಿಂತ ಕೌಶಲ್ಯವಂತರಿಗೆ ಹೆಚ್ಚಿನ ಮಹತ್ವವಿದ್ದು, ಮಹಿಳೆಯರ ಸಬಲಿಕರಣಕ್ಕಾಗಿ ನಲ್‍ಜಲ್ ಮಿತ್ರ ಕಾರ್ಯಕ್ರಮದಡಿ ಕೌಶಲ್ಯದೊಂದಿಗೆ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಲಬುರಗಿ ಜಿಟಿಟಿಸಿ ಪ್ರಾಚಾರ್ಯರಾದ ಅನೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಡಿಆರ್‌ಡಿಎ ಯೋಜನಾ ನಿರ್ದೇಶಕ ಜಗದೇವಪ್ಪ, ಬೆಂಗಳೂರಿನ ಜಿಟಿಟಿಸಿ ವ್ಯವಸ್ಥಾಪಕ ರಾಜಕುಮಾರ ಮತ್ತು ಡಿಜಿಎಂ ರಾದ ಲಕ್ಷ್ಮಣ ನಾಯಕ್, ಸೇರಿದಂತೆ ಬೆಂಗಳೂರಿನ ಪ್ರಾಂಶುಪಾಲರು, ಬೆಂಗಳೂರಿನ ಜಿ.ಟಿ.ಟಿ.ಸಿ. ಕಾಲೇಜಿನ ಮುಖ್ಯ ಕಚೇರಿಯ ವ್ಯವಸ್ಥಾಪಕರು ಮತ್ತು ಉಪ-ವ್ಯವಸ್ಥಾಪಕರು ಹಾಗೂ ಎನ್‍ಆರ್ ಎಲ್‍ಎಮ್ ಸಿಬ್ಬಂದಿಗಳು ಉಪಸ್ಥಿತರಿದ್ದರು.