ಕಲಬುರಗಿ | ಅ.26 ರಂದು ವೀರ ಸ್ತ್ರೀ ಪ್ರಶಸ್ತಿ ಸಮಾರಂಭ : ವಿಜಯಕುಮಾರ ತೇಗಲತಿಪ್ಪಿ
ಕಲಬುರಗಿ: ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ವೀರ ಕನ್ನಡತಿ-ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಮೊದಲ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಹಾಗೂ ಜಿಲ್ಲೆಯ ಮಹಿಳಾ ಸಾಧಕರಿಗೆ ವೀರ ಸ್ತ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅ.26ರ ರವಿವಾರದಂದು ಬೆಳಗ್ಗೆ 11.15 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮಳ ಧೈರ್ಯ, ಸಾಹಸ, ಸ್ವಾಭಿಮಾನವಾದ ಇತಿಹಾಸವನ್ನು ಇಂದಿನ ಸಮಾಜಕ್ಕೆ ತಿಳಿಸಿಕೊಡುವ ಕಾರ್ಯ ಪರಿಷತ್ತು ಈ ಕಾರ್ಯಕ್ರಮದ ಮೂಲಕ ಮಾಡುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ಕನ್ನಡ ನಾಡಿನ ಹಾಗೂ ಈ ದೇಶದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ಈ ದಿಸೆಯಲ್ಲಿ ಅರ್ಥಪೂರ್ಣ ಜಯಂತಿಯನ್ನು ರೂಪಿಸಲಾಗಿದೆ ಎಂದರು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ತಹಶೀಲ್ದಾರರಾದ ಸಾವಿತ್ರಿ ಶರಣು ಸಲಗರ ಸಮಾರಂಭ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಮಾಲತಿ ರೇಷ್ಮಿ, ರಾಜ್ಯಮಟ್ಟದ ಕಿತ್ತುರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಅನ್ನಪೂರ್ಣ ಸಂಗೋಳಗಿ, ಉತ್ಸವ ಸಮಿತಿಯ ಅಧ್ಯಕ್ಷೆ - ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಗೌರವಾಧ್ಯಕ್ಷ ಸೈಯದ್ ನಜಿರುದ್ದಿನ್ ಮುತ್ತವಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ವೀರ ಸ್ತ್ರೀ ಪ್ರಶಸ್ತಿಗೆ ಆಯ್ಕೆಯಾದವರು :
ತಮ್ಮ ವೃತ್ತಿಯಲ್ಲಿದ್ದುಕೊಂಡೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸಾಧಕರಾದ ಪಾಲಿಕೆ ಉಪ ಮೆಯರ್ ನಾಗವೇಣಿ ತಿಪ್ಪಣಪ್ಪ ಕಮಕನೂರ, ಎಂ.ಆರ್.ಎಂ.ಸಿ. ಕಾಲೇಜಿನ ಪ್ರಾಧ್ಯಾಪಕಿ ಡಾ.ಶಾಂತಾ ಪಾಟೀಲ, ಜೇಸ್ಕಾಂ ನ ಎಇಇ ಮಾಲಿನಿ ಸ್ವಾಮಿ, ಚಿತ್ತಾಪೂರ ಪುರಸಭೆಯ ಮಾಜಿ ಅಧ್ಯಕ್ಷೆ-ಹಾಲಿ ಸದಸ್ಯೆ ಶೀಲಾ ಬಾಬು ಕಾಶಿ, ಶರಣ ಚಿಂತಕಿ ಶಾರದಾ ಓಗಿ, ಸಮಾಜ ಸೇವಕಿ ಸುಮಾ ಶರಣು ಪಪ್ಪಾ, ಕನ್ನಡಪರ ಚಿಂತಕಿ ಫಾತೀಮಾ ಶೇಖ್, ಜನಪರ ಹೋರಾಟಗಾರ್ತಿ ಚಂದಮ್ಮ ಗೋಳಾ ಅವರಿಗೆ ವೀರ ಸ್ತ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.