ಕಲಬುರಗಿ| ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಾಥಾ
ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿರುವ “ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ” ಕಲಬುರಗಿ ನಗರದ ಕೆಕೆಆರ್ ಡಿಬಿ ಕಚೇರಿಯಲ್ಲಿ ಮಂಡಳಿಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಕೊನೆಗೊಂಡಿತು.
ಬಳ್ಳಾರಿಯಿಂದ ಅಕ್ಟೋಬರ್ 6 ರಿಂದ ಪ್ರಾರಂಭವಾದ ಈ ಜಾಥಾವು ರಾಯಚೂರು, ಬೀದರ್ ಮೂಲಕ ಕಲಬುರಗಿಯಲ್ಲಿ ಕೊನೆಗೊಂಡಿತು.
ಈ ವೇಳೆ ಮಾತನಾಡಿದ ಡಬ್ಲ್ಯೂಪಿಐ ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ಕಲ್ಯಾಣ ಕರ್ನಾಟಕ ಇಂದು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ಸಂವಿಧಾನದ 98ನೇ ತಿದ್ದುಪಡಿ ಮೂಲಕ 2013ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದರೂ, ಸುಮಾರು 25,000 ಕೋಟಿ ರೂ. ಅನುದಾನ ಕಳೆದ 12 ವರ್ಷಗಳಲ್ಲಿ ಬಿಡುಗಡೆಯಾದರೂ ಅಭಿವೃದ್ಧಿಯ ಫಲಿತಾಂಶಗಳು ಜನರ ಕೈಗೆ ತಲುಪಿಲ್ಲ. ಬೆಂಗಳೂರು ವಿಭಾಗದ ತಲಾ ಆದಾಯ 5.01 ಲಕ್ಷವಾಗಿದ್ದರೆ ಕಲ್ಯಾಣ ಕರ್ನಾಟಕದಲ್ಲಿ ಅದು ಕೇವಲ 1.73 ಲಕ್ಷವಾಗಿದೆ. ರಾಜ್ಯದ ಅತಿ ಬಡ ಜಿಲ್ಲೆಗಳು ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ. 17.48 ಲಕ್ಷ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಕೇವಲ 1.96 ಲಕ್ಷ (11%) ಕೈಗಾರಿಕೆಗಳು ಮಾತ್ರ ಈ ಭಾಗದಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ವರ್ಷಕ್ಕೊಮ್ಮೆ 10 ಸಾವಿರ ಇಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದರೂ ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆ. ಸುಮಾರು 30 ಲಕ್ಷ ಜನರು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸುಮಾರು 80 ಸಾವಿರ ಸರ್ಕಾರಿ ಹುದ್ದೆಗಳು ಖಾಲಿಯಾಗಿವೆ, ಅದರಲ್ಲೂ 22 ಸಾವಿರ ಶಿಕ್ಷಕರ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ ಎಂದು ಹೇಳಿದರು.
ಈ ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, DMF, KMERC ಅನುದಾನಗಳ ಸರಿಯಾದ ಬಳಕೆಯಾಗಬೇಕು, ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಬೇಕು, ನೀರಾವರಿ ಯೋಜನೆಗಳ ಶೀಘ್ರ ಪೂರ್ಣಗೋಳಿಸಬೇಕು, ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಶಿಕ್ಷಕರ ಹುದ್ದೆಗಳ ಭರ್ತಿ ಮಾಡಬೇಕು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ನಡೆಯುವ ಅನ್ಯಾಯ ತಡೆಯಲು ವಿಶೇಷ ನ್ಯಾಯಮಂಡಳಿ ಸ್ಥಾಪಿಸುವುದು, ಜನಸಂಖ್ಯೆ ಆಧಾರದ ಮೇಲೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಸಾಳಿಯನ್, ಪ್ರಭಾಕರ್, ಹಬೀಬುಲ್ಲಾ ಖಾನ್, ರಾಜ್ಯ ಉಪಾಧ್ಯಕ್ಷ ಮುಜಾಹಿದಾ ಪಾಷಾ ಕುರೆಶಿ, ರಾಜ್ಯ ಕಾರ್ಯದರ್ಶಿ ಮೂಬೀನ್ ಅಹಮ್ಮದ್, ಜಬ್ಬಾರ್ ಗೋಲಾ, ಅಫ್ಜಲ್ ಮೆಹಮೂದ್, ಫರೀದ್ ಮಾನವಿ, ಫಹಾದ್ ಮೊಹ್ಸಿನ್, ಇಬ್ರಾಹಿಂ ಪಟೇಲ್, ಮಹೇಶ್ ರಾಥೋಡ್, ಸಯ್ಯದ್ ಅಮ್ಜದ್, ಆದಿಲ್ ಪಟೇಲ್, ಸಲೀಂ ಚಿತಪೂರಿ, ಫರೀದ್, ಸೂಫಿಯಾನ್, ಮುಭಾಶಿರ್, ಸಯ್ಯದ್ ಇರ್ಫಾನ್ ಸೇರಿದಂತೆ ಹಲವರು ಇದ್ದರು.