ಕಲಬುರಗಿ | ಮಹಿಳೆಯರು ಪುರುಷರಿಗಿಂತ ಕಡಿಮೆಯಿಲ್ಲ: ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ
ಕಲಬುರಗಿ : ಅನಾದಿ ಕಾಲದಿಂದಲೂ ಮಹಿಳೆಯರು ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ನಿರ್ಣಾಯಕ ಮತ್ತು ಸಮಾನ ಪಾತ್ರವನ್ನು ವಹಿಸಿದ್ದಾರೆ, ಅವರು ಪುರುಷರಿಗಿಂತ ಕಡಿಮೆಯೇನಲ್ಲಾ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ.ದಾಕ್ಷಾಯಿಣಿ ಅವ್ವಾಜಿ ಹೇಳಿದರು.
ಕಲಬುರಗಿ ನಗರದಲ್ಲಿ ಶರಣಬಸವ ವಿಶ್ವವಿದ್ಯಾಲಯವು ಶನಿವಾರ ಆಯೋಜಿಸಿದ್ದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಅವರ 54ನೇ ಪುಣ್ಯ ಸ್ಮರಣೆ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನೀಡಿದ ಅಪಾರ ಕೊಡುಗೆಗಾಗಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಿದ ನಂತರ ಮಾತನಾಡಿದ ಡಾ.ಅವ್ವಾಜಿ, ಭಾರತದಲ್ಲಿ ಮಹಿಳೆಯರನ್ನು ಉನ್ನತ ಪೀಠದ ಮೇಲೆ ಇರಿಸಲಾಗಿದೆ ಮತ್ತು ಸೃಷ್ಟಿಕರ್ತರಾಗಿ ಹಾಗೂ ಶಕ್ತಿಯ ಸಂಕೇತವಾಗಿ ಗುರುತಿಸಲಾಗಿದೆ ಎಂದು ಹೇಳಿದರು.
“ಮಹಿಳೆಯರು ಊಹಿಸಿದಂತೆ ದುರ್ಬಲರಲ್ಲ ಅಥವಾ ಕೆಳಮಟ್ಟದಲ್ಲಿಲ್ಲ ಎಂದು ಜಗತ್ತಿಗೆ ಸಾಬೀತುಪಡಿಸಲು ತಮ್ಮ ಅವಿನಾಭಾವ ಮನೋಭಾವವನ್ನು ಪದೇ ಪದೇ ಪ್ರದರ್ಶಿಸಿದ್ದಾರೆ” ಎಂದರು.
ಶರಣಬಸವೇಶ್ವರ ಸಂಸ್ಥಾನ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಮಹಿಳೆಯರ ಶೈಕ್ಷಣಿಕ ಸಬಲೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಹಾಗೂ ಸಂಘವು ನಡೆಸುವ ಶಿಕ್ಷಣ ಸಂಸ್ಥೆಗಳು ಮತ್ತು ಶರಣಬಸವ ವಿಶ್ವವಿದ್ಯಾಲಯವು ವಿವಿಧ ವಿಭಾಗಗಳಲ್ಲಿ, ವಿಭಿನ್ನ ಸಾಮಥ್ರ್ಯಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಲಾಭದಾಯಕ ಉದ್ಯೋಗ ಮತ್ತು ಗೌರವದ ಹಲವು ಮಾರ್ಗಗಳನ್ನು ತೆರೆದಿವೆ ಎಂದು ಡಾ.ಅವ್ವಾಜಿ ಹೇಳಿದರು.
ಸಂಘವು ನಡೆಸುವ ಶಿಕ್ಷಣ ಸಂಸ್ಥೆಗಳು ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕೆ ಮತ್ತು ಮಹಿಳಾ ಕೇಂದ್ರಿತವಾಗಿರುವುದಕ್ಕೆ ಒಂದು ಶ್ರೇಷ್ಠ ಉದಾಹರಣೆಯಾಗಿ ನಿಂತಿವೆ ಮತ್ತು ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.
ಸಂಸ್ಥಾನದ 7ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರು, 1930 ರ ದಶಕದಲ್ಲಿ ಮಹಾದೇವಿ ಬಾಲಕಿಯರ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳ, ವಿಶೇಷವಾಗಿ ಮಹಿಳೆಯರ ಶೈಕ್ಷಣಿಕ ಸಬಲೀಕರಣದ ಬೀಜಗಳನ್ನು ಬಿತ್ತಿದರು ಎಂದು ಅವರು ಹೇಳಿದರು.
ಇದು ಈ ಪ್ರದೇಶದ ಮೊದಲ ಕನ್ನಡ ಮಾಧ್ಯಮ ಶಾಲೆಯಾಗಿತ್ತು. ನಿಜಾಮ್ ಸರ್ಕಾರದ ತೀವ್ರ ಪ್ರತಿರೋಧವನ್ನು ಎದುರಿಸಿ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ಈ ಶಾಲೆಯು ನಿಜಾಮ್ ಜಾರಿಗೊಳಿಸಿದ "ಪರ್ದಾ" ವ್ಯವಸ್ಥೆಯನ್ನು ಜಯಿಸಲು ಮತ್ತು ಸುರಕ್ಷಿತ ವಾತಾವರಣದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಹೆಣ್ಣು ಮಕ್ಕಳಿಗೆ ಅವಕಾಶಗಳನ್ನು ಒದಗಿಸಿತು ಎಂದು ತಿಳಿಸಿದರು.
ಸಂಸ್ಥಾನದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ತಮ್ಮ ತಂದೆ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರಿಂದ ಅಧಿಕಾರ ವಹಿಸಿಕೊಂಡ 8ನೇ ಪೀಠಾಧಿಪತಿ ಅವರು ತಂದೆಯ ದಾರಿಯಲ್ಲಿಯೇ ಉತ್ತಮ ಕೆಲಸವನ್ನು ಮುಂದುವರೆಸಿದರು ಮತ್ತು ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಕಲಬುರಗಿ ನಗರವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಲು ಶರಣಬಸವ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು ಎಂದು ಡಾ. ಅವ್ವಾಜಿ ಹೇಳಿದರು. “ಕೇವಲ 30 ವಿದ್ಯಾರ್ಥಿಗಳಿದ್ದ ಆ ಶಾಲೆಯು ಈಗ ಸಂಘ ಮತ್ತು ವಿಶ್ವವಿದ್ಯಾಲಯದಿಂದ ನಡೆಸಲ್ಪಡುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿದೆ. ಈ ಒಟ್ಟು 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಶೇ.60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಹಿಳಾ ವಿದ್ಯಾರ್ಥಿಗಳಾಗಿದ್ದಾರೆ” ಎಂದರು.
ಶರಣಬಸವ ವಿಶ್ವವಿದ್ಯಾಲಯ ಮತ್ತು ಸಂಘ ನಡೆಸುವ ಶಿಕ್ಷಣ ಸಂಸ್ಥೆಗಳು ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿವೆ. ವಿದ್ಯಾರ್ಥಿನಿಯರಿಗೆ ಅನೇಕ ಉದ್ಯೋಗಾವಕಾಶಗಳನ್ನು ತೆರೆದಿವೆ ಮತ್ತು ಸಂಘ ಹಾಗೂ ವಿಶ್ವವಿದ್ಯಾಲಯ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಶೇ.60 ರಷ್ಟು ಬೋಧನಾ ಸಿಬ್ಬಂದಿ ಮಹಿಳೆಯರಾಗಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದರು. ಇದೇ ಸಂದರ್ಭದಲ್ಲಿ ದೇಶದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಯಾದ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISಖಿಇ) ನಿಂದ "ಭಾರತದ ಮಹಿಳೆಯರ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು" ಎಂದು ಗುರುತಿಸಲ್ಪಟ್ಟಿದ್ದಕ್ಕಾಗಿ ಅವರು ಗೋದುತಾಯಿ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಇದಕ್ಕೂ ಮೊದಲು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಖ್ಯಾತ ಶಿಕ್ಷಕಿ ಶ್ರೀಮತಿ ಶಕುಂತಲಾ ದುರ್ಗಿ ಅವರಿಗೆ ಮಾತೋಶ್ರೀ ಗೋದುತಾಯಿ ಅವ್ವ ಪ್ರಶಸ್ತಿಯನ್ನು ನೀಡಲಾಯಿತು. ಡಾ.ಭಾಗ್ಯಶ್ರೀ ಪಾಟೀಲ್ ಅವರಿಗೆ ಸ್ತ್ರೀ ರತ್ನ ಪ್ರಶಸ್ತಿ, ಮಹಿಳಾ ಉದ್ಯಮಿ ಜಯಶ್ರೀ ಬೆನೀ ಅವರಿಗೆ ಸ್ತ್ರೀ ಶಕ್ತಿ ಪ್ರಶಸ್ತಿ, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶೈಲಜಾ ತಪಲ್ಲಿ ಅವರಿಗೆ ವೀರಮಹಿಳೆ ಪ್ರಶಸ್ತಿ, ಶಾಸ್ತ್ರೀಯ ನೃತ್ಯಗಾರ್ತಿ ಸಂಧ್ಯಾ ಭಟ್ ಅವರಿಗೆ ಕಾಯಕ ರತ್ನ ಪ್ರಶಸ್ತಿ ಮತ್ತು ಡಾ.ಶ್ರೀದೇವಿ ಕಲ್ಯಾಣ ಅವರಿಗೆ ವುಮನ್ ಎಕ್ಸೆಲನ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಲೆಕ್ಕಾಧಿಕಾರಿ ಶ್ರೀದೇವಿ ಆನಂದ್ ಮುಖ್ಯ ಅತಿಥಿ ಭಾಷಣ ಮಾಡಿದರು. ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮತ್ತು ಶಕುಂತಲಾ ದುರ್ಗಿ ಈ ಸಂದರ್ಭದಲ್ಲಿ ಮಾತನಾಡಿದರು. ವಿವಿಯ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಸ್ವಾಗತಿಸಿದರು. ಪ್ರೊ.ಸುಜಾತಾ ಮಲ್ಲಾಪುರ ವಂದಿಸಿದರು.