ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ; ಐವರು ಆರೋಪಿಗಳ ಬಂಧನ
ಕಲಬುರಗಿ: ನಗರದ ಹೀರಾಪುರ ಪ್ರದೇಶದಲ್ಲಿರುವ ಸ್ಮಶಾನ ಭೂಮಿಯಲ್ಲಿ ಇತ್ತೀಚೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೋರ್ವನನ್ನು ಬರ್ಬರ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಾಪುರ ನಿವಾಸಿ ಪವನ್ ಅಲಿಯಾಸ್ ಪ್ರವೀಣ್ ಮಲ್ಲಿಕಾರ್ಜುನ ಮುತ್ತಗಿ(29), ಪೈಂಟರ್ ಕೆಲಸ ಮಾಡುತ್ತಿದ್ದ ಹಿರಾಪುರದ ಕೆ.ಎಸ್.ಆರ್.ಟಿ.ಸಿ. ಕಾಲೋನಿ ನಿವಾಸಿ ಸಂಜಯ್ ಅಲಿಯಾಸ್ ಕರಿಯ ಹಣಮಂತ ಸಾವರೇಕರ್(23), ಹಿರಾಪೂರದ ಝಂಡಾ ಕಟ್ಟೆ ಹತ್ತಿರದ ನಿವಾಸಿ ರಾಹುಲ ನೀಲಪ್ಪ ರುಕುಮಪೂರ (20), ಹಿರಾಪೂರ ಸಮುದಾಯ ಭವನದ ಹತ್ತಿರದ ಲಕ್ಷ್ಮೀಕಾಂತ ಸರೇಶ ಮೇಲಮನಿ(23), ಹಿರಾಪೂರ ಧರ್ಮಶಾಲೆ ಹತ್ತಿರದ ಆದರ್ಶ ರುದ್ರವಾಡಿ(21) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಕಲಬುರಗಿ ತಾಲ್ಲೂಕಿನ ಮೈನಾಳ ಗ್ರಾಮದ ಯುವಕ ಮರೆಪ್ಪ ಭೀಮರಾಯ ಕಟ್ಟಿಮನಿ (23) ಕೊಲೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಶೋಕ್ ನಗರ ಪೊಲೀಸರು, ಐವರು ಆರೋಪಿಗಳನ್ನು ವಶಕ್ಕೆ ಪಡೆದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.