ಕಲಬುರಗಿ | ಯುವಕನ ಕೊಲೆ ಪ್ರಕರಣ : 4 ತಿಂಗಳ ಬಳಿಕ 10 ಮಂದಿ ಆರೋಪಿಗಳ ಬಂಧನ
ಕಲಬುರಗಿ: ಆಳಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜನವರಿಯ ಕೊನೆಯ ವಾರದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು 4 ತಿಂಗಳ ಬಳಿಕ ಒಟ್ಟು 10 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ರಾಹುಲ್ ಖಜೂರೆ(28) ಕಾಣೆಯಾಗಿದ್ದಾನೆಂದು ಅವರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಕಾಣೆಯಾಗಿರುವ ಯುವಕನ ಮೃತದೇಹವು ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ಬೆಡಗಾ ಸಮೀಪದ ಬೆಣ್ಣೆತೋರಾ ಡ್ಯಾಮಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ತನಿಖೆ ನಡೆಸಿ, ಕೆಲವರನ್ನು ತನಿಖೆಗೆ ಒಳಪಡಿಸಿದಾಗ ಆರೋಪಿಗಳ ಹಿನ್ನೆಲೆ ಗುರುತಿಸಿದ್ದಾರೆ. ನಿರಂತರ ಕಾರ್ಯಾಚರಣೆಯಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಬಂಧಿತರನ್ನು ಅನೂರು ಗ್ರಾಮದ ಪೃಥ್ವಿರಾಜ್ ಹರಿಪ್ರಸಾದ್ ಚಿಟಂಪಲ್ಲೇ, ಭಾಗ್ಯವಂತಿ ಹರಿಪ್ರಸಾದ್ ಚಿಟಂಪಲ್ಲೇ, ಸೀತಾಬಾಯಿ ಗಂಡ ಹರಿಪ್ರಸಾದ್ ಚಿಟಂಪಲ್ಲೇ, ಪವನ್ ರಜಪೂತ್, ಶ್ರೀಧರ್, ಸಂದೀಪ್, ಸತ್ಯಭಾಮ, ಸರಸ್ವತಿ ಮತ್ತು ಮಹಾದೇವ ಎಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಯುವಕನನ್ನು ಕೊಲೆಗೈದು ಕಾಶಿ, ಅಯೋಧ್ಯೆ, ಪಂಢರಾಪುರಕ್ಕೆ ಪ್ರವಾಸ ತೆರಳಿದ್ದ ಆರೋಪಿ :
ಆರೋಪಿ ಪೃಥ್ವಿರಾಜ್ ಹರಿಪ್ರಸಾದ್ ಯುವಕನನ್ನು ಕೊಲೆಗೈದ ನಂತರ ಅಯೋಧ್ಯೆಯ ಪ್ರಯಾಗರಾಜ್ ನ ಮಹಾಕುಂಭಮೇಳ, ಫಂಡರಾಪೂರ, ಕಾಶಿ ಮತ್ತಿತರ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾನೆ. ಪರಾರಿಯಾಗಿದ್ದ ಪೃಥ್ವಿರಾಜ್ ನನ್ನು ಕೊನೆಗೂ ಪೊಲೀಸರು ಬಂಧಿಸಿ, ಬೈಕ್ ಒಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘನ್ನನವರ್, ಡಿವೈಎಸ್ಪಿ ಗೋಪಿ ಬಿ.ಆರ್., ಪಿಐ ಶಂಕರ್ ಕೊಡ್ಲಾ, ಸಂಜೀವ್ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.