ರಾಯಚೂರು: ಉಸ್ತುವಾರಿ ಸಚಿವರಿಗೆ ಕೆಡಿಪಿ ಸದಸ್ಯರ ತರಾಟೆ
ರಾಯಚೂರು: ಲಿಂಗಸೂಗುರಿನಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಡಿಪಿ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಸಭೆ ಕರೆಯಲಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಗೆ ನಮಗೆ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಕ್ಷೇತ್ರದಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಕ್ಷೇತ್ರದ ಜನರ ಸಮಸ್ಯೆ ಯಾರ ಹತ್ತಿರ ಹೇಳಬೇಕು ಎಂದು ಕೆಡಿಪಿ ಸದಸ್ಯರಾದ ಪರಮೇಶ್, ರಾಘವೇಂದ್ರ, ಶ್ವೇತಾ, ಶರಣಪ್ಪ ಅವರು ಸಚಿವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮನ್ನು ಸರ್ಕಾರ ಯಾಕೆ ಕೆಡಿಪಿ ಸದಸ್ಯರನ್ನಾಗಿ ನೇಮಕ ಮಾಡಿದೆ. ಸಭೆಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಮತ್ತು ಆ ಕುರಿತು ಚರ್ಚಿಸಲು ನಮಗೆ ಅವಕಾಶವೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವೆ ಎಂದು ಭರವಸೆ ನೀಡಿ ಸಮಾಧಾನ ಪಡಿಸಿದರು.