ಬೆಳೆಹಾನಿ ಪರಿಹಾರ ಪಾವತಿಯಲ್ಲಿ ತಾರತಮ್ಯ ಆರೋಪ| ರೈತರ ದೂರು ಪರಿಶೀಲಿಸಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕ ಅಜಯ್ ಸಿಂಗ್ ಸೂಚನೆ
ಕಲಬುರಗಿ: ಬೆಳೆಹಾನಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯದ ರೈತರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಹೆಚ್ಚುಕಮ್ಮಿ ಆಗಿದೆ ಎಂಬ ದೂರುಗಳಿವೆ. ಇವನ್ನೆಲ್ಲ ಗಮನಿಸಲಾಗಿದ್ದು ಬೆಳಗಾವಿ ಸದನದಲ್ಲಿ ಪ್ರಸ್ತಾಪಿಸಿ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಲು ಯತ್ನಿಸಲಾಗುತ್ತದೆ ಎಂದು ಕೆಕೆಆರ್‌ಡಿಬಿ ಅದ್ಯಕ್ಷರು, ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಅಜಯ್ ಧರ್ಮಸಿಂಗ್, ರಾಜ್ಯದ 14.24 ಲಕ್ಷ ಫಲಾನುಭವಿಗಳಿಗೆ ಒಟ್ಟು 1,033.60 ಕೋಟಿ ಇನ್ ಪುಟ್ ಸಬ್ಸಿಡಿ ಮೊತ್ತ ರೈತರ ಖಾತೆಗೆ ವರ್ಗಾವಣೆ ಆರಂಭಿಸಿದೆ, ಈಗಾಗಲೇ 2 ಕಂತುಗಳಲ್ಲಿ ಹಣ ರೈತರ ಖಾತೆಗೆ ತಲುಪಿದೆ. ಕೆಲವು ಖಾತೆಗಳು ಲಿಂಕ್ ಆಗದ್ದಕ್ಕೆ ಹಣ ವರ್ಗಾವಣೆಯಾಗಿಲ್ಲ. ಆ ಸಮಸ್ಯೆ ಕೂಡಾ ಪರಿಹರಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಈ ಮದ್ಯೆ ಸಮೀಕ್ಷೆಯಲ್ಲಿನ ಕೆಲವು ದೋಷಗಳು, ಹಣ ವಿತರಣೆಯಲ್ಲಿನ ಸಮಸ್ಯೆ ಚರ್ಚೆಯಲ್ಲಿವೆ. ಪತ್ರಿಕೆ ವರದಿಗಳನ್ನೂ ಗಮನಿಸಲಾಗಿದೆ. ಇವನ್ನೆಲ್ಲ ಬೆಳಗಾವಿ ಸದನದಲ್ಲಿ ಸರ್ಕಾರದ ಗಮನಕ್ಕೆ, ಸಿಎಂ ಹಾಗೂ ಕೃಷಿ ಸಚಿವರ ಗಮನಕ್ಕೆ ತಂದು ರೈತರಿಗೆ ಪರಿಹಾರ ಕೈ ತಲುಪುವಂತೆ ಮಾಡಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಭರವಸೆ ನೀಡಿದ್ದಾರೆ.
ರಾಜ್ಯದ 14.24 ಲಕ್ಷ ಫಲಾನುಭವಿಗಳಿಗೆ ಇನ್ ಪುಟ್ ಸಬ್ಸಿಡಿ ರೂ 1,033.60 ಕೋಟಿ ರೈತರ ಖಾತೆಗೆ ವರ್ಗಾವಣೆಗೆ ಕ್ರಮವಹಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಪರಿಹಾರದ ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಮೂಲಕ ಪರಿಹಾರ ಹಂಚಿಕೆಗೆ ಚಾಲನೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗದಲ್ಲಿ ಅತಿವೃಷ್ಟಿಯಿಂದ ರೈತರ ಬದುಕು ದುಸ್ಥರವಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿ ಗಳಿಗೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಗಮನಕ್ಕೆ ತರಲಾಗಿತ್ತು, ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿಗಳು ಕಲಬುರಗಿಯಲ್ಲಿ ಪರಿಹಾರ ಘೋಷಣೆ ಮಾಡಿದ್ದರು. ಎನ್‌ಡಿಆರ್‌ಎಫ್ ನಿಯಮಗಳಲ್ಲಿರುವ ಮೊತ್ತದೊಂದಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ಘೋಷಿಸಲಾಗಿತ್ತು. ವೈಮಾನಿಕ ಸಮೀಕ್ಷೆಯ ವೇಳೆ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದ ಸಿಎಂ ರೈತರ ಕಷ್ಟ ನಷ್ಟಗಳನ್ನು ಅವಲೋಕಿಸಿದ್ದರು. ಅಂತೆಯೇ ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚಿನ ಪರಿಹಾರ ದೊರಕಿದೆ. ರೈತರು ಕಾಂಗ್ರೆಸ್ ಸರ್ಕಾರದ ರೈತ ಪರ ಧೋರಣೆಯನ್ನು ಮನಗಾಣಬೇಕು. ಪರಿಹಾರ ವಿತರಣೆಯಲ್ಲಿನ ದೋಷಗಳನ್ನು, ತಾಂಕ್ಷಿಕ ನ್ಯೂನತೆಗಳನ್ನು ಶೀಘ್ರ ಸರಿಪಡಿಸಲಾಗುತ್ತದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೆಕೆಆರ್‌ಡಿಬಿಯಲ್ಲಿ ಅನುದಾನ ವೆಚ್ಚವಾಗುತ್ತಿಲ್ಲವೆಂಬ ಕಾಲವಿತ್ತು. ಈಗ ಅದು ಬದಲಾಗಿದೆ. ನಾವು ಹೆಚ್ಚಿನ ಅನುದಾನ ಹಲವು ಯೋಜನೆಗಳಲ್ಲಿ ವೆಚ್ಚ ಮಾಡುತ್ತಿದ್ದೇವೆ. ಇದರಿಂದ ಈ ಭಾಗದಲ್ಲಿ ಪ್ರಗತಿ ಕಣ್ಣಿಗೆ ಕಾಣೋ ರೀತಿಯಲ್ಲಿ ಆಗುತ್ತಿದೆ. ಈ ಆರ್ಥಿಕ ವರ್ಷದ ಡಿಸೆಂಬರ್‌ವರೆಗೂ 1626 ಕೋಟಿ ರೂ. ವೆಚ್ಚವಾಗಿದೆ. ಈ ಮಾರ್ಚ್ ಒಳಗಾಗಿ 4 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ಕಳೆದ ವರ್ಷ 1, 200 ಕೋಟಿ ರೂ ವೆಚ್ಚವಾಗಿತ್ತು. ಈ ಬಾರಿ ಆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಡಾ.ಅಜಯ್ ಸಿಂಗ್ ಹೇಳಿದ್ದಾರೆ.